ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ಸುಳ್ಳು ಸಂದೇಶ ರವಾನಿಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಉದ್ಯಮಿ, ಮಾಜಿ ಸಂಸದರ ಆಪ್ತರಾದ ಸೀತಾರಾಮ ರೈ ಕೆದಂಬಾಡಿಗುತ್ತು ಈ ಬಗ್ಗೆ ದೂರು ನೀಡಿದ್ದಾರೆ. ಅಝೀಜ್ ಹಾಗೂ ಇತರರು ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧವಾಗಿ ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್ನಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೇ 14ರ ಬೆಳಗ್ಗಿನಿಂದ ವಾಟ್ಸ್ಆ್ಯಪ್ನಲ್ಲಿ ನಿರಂತರವಾಗಿ ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ವಿರುದ್ದ ಮಾನಹಾನಿಯಾಗುವಂತೆ ಸಂದೇಶವನ್ನು ಹರಿಯಬಿಡಲಾಗಿದೆ.
ಅಜೀಜ್ ಎಂಬಾತ "ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಗ್ ಟ್ವಿಸ್ಟ್; ಹಣ ನೀಡಿ ಕೊಲೆ ಮಾಡಿಸಿದ ನಳಿನ್ ಕುಮಾರ್ ಕಟೀಲ್" ಎಂಬಿತ್ಯಾದಿ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ಪ್ರಸಾದ್ ಕೆ.ಎಂಬಾತನಿಂದಲೂ ಈ ವಿಚಾರದ ಬಗ್ಗೆ ಪ್ರಚಾರವಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರ ತೇಜೋವಧೆ ಮಾಡಲು ಹಲವಾರು ಜನರು ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆ. ಮಾಜಿ ಸಂಸದರ ವಿರುದ್ಧ ಮಾನಹಾನಿಕರವಾದ ಸಂದೇಶಗಳನ್ನು ರವಾನಿಸುತ್ತಿರುವುದರಿಂದ ಅವರ ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟಾಗಿರುತ್ತದೆ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಮಾನಹಾನಿಕರ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪೋಕ್ಸೋ ಕೇಸ್: ಬಿ.ಎಸ್.ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ - Yediyurappa POCSO Case