ಮೈಸೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿ ವಿಲಾಸ ನೀರು ಸರಬರಾಜು ಸಂಸ್ಥೆಯ ಹೊರಗುತ್ತಿಗೆ ನೌಕರರು, ಗ್ರಾಹಕರಿಂದ ನೀರಿನ ಬಿಲ್ ವಸೂಲಿ ಮಾಡಿ ಪಾಲಿಕೆ ನಕಲಿ ಬಿಲ್ ನೀಡಿ ಹಣ ಜಮಾ ಮಾಡದೆ 1.25 ಕೋಟಿ ಹಣವನ್ನು ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ 21 ಮಂದಿ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ, ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಗ್ರಾಹಕರಿಂದ ನೀರಿನ ಬಿಲ್ಲಿನ ಮೊತ್ತವನ್ನು ಪಡೆದು, ಪಾಲಿಕೆಯ ಖಾತೆಗೆ ಜಮಾ ಮಾಡದೆ ಅನಧಿಕೃತವಾಗಿ ಮ್ಯಾನುವಲ್ ಬಿಲ್ ನೀಡಿ ವಂಚನೆ ಮಾಡುತ್ತಿದ್ದ, 6 ಮಂದಿ ಟೈಂ ಸ್ಕೇಲ್ ನೌಕರರು ಮತ್ತು 15 ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್ ಸೇವೆಯಿಂದ ವಜಾಗೊಳಿಸಿದ್ದಾರೆ.
"ಸಾರ್ವಜನಿಕರಿಂದ ಸಂಗ್ರಹಿಸಿದ ಕುಡಿಯುವ ನೀರಿನ ಬಿಲ್ ಹಣವನ್ನು ಪಾಲಿಕೆಯ ಖಾತೆಗೆ ಜಮಾ ಮಾಡದೇ ವಂಚಸಿರುವುದಲ್ಲದೇ, ಸಾಫ್ಟ್‌ವೇರ್ ಮಾಡ್ಯೂಲ್ ಬಳಸಿ ನಕಲಿ ರಶೀದಿ ಸೃಷ್ಟಿ ಮಾಡಿ ಗ್ರಾಹಕರಿಗೆ ನೀಡುತ್ತಿದ್ದರು. ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಮಾರು 1.25 ಕೋಟಿ ಹಣ ನಷ್ಟವಾಗಿದೆ. 2024ರ ಅಕ್ಟೋಬರ್‌ನಲ್ಲಿ ನೀರಿನ ಬಿಲ್ ಬಾಕಿ ವಸೂಲಿ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಕೆ. ಸಿಂಧು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಮೇಲ್ನೋಟಕ್ಕೆ 1.25 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ವಂಚಿತರಿಂದ 99 ಲಕ್ಷ ಹಣವನ್ನು ವಸೂಲಿ ಮಾಡಲಾಗಿದೆ" ಎಂದು ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್ ಮಾಹಿತಿ ನೀಡಿದರು.
ಗ್ರಾಹಕರಿಗೆ ವಂಚನೆ ಮಾಡುತ್ತಿದ್ದದ್ದು ಹೇಗೆ ಗೊತ್ತಾ?: ಮೀಟರ್ ರೀಡರ್ಸ್, ಗ್ರಾಹಕರಿಂದ ನೇರವಾಗಿ ಹಣ ಪಡೆದುಕೊಂಡು ಮ್ಯಾನ್ಯುವಲ್ ಬಿಲ್ ನೀಡುತ್ತಿದ್ದರು. ಗ್ರಾಹಕರು, ಹಣ ಸಂದಾಯವಾಗದೇ ಇರುವ ಬಗ್ಗೆ ಮುಂದಿನ ತಿಂಗಳು ಬಂದ ಬಿಲ್ ಅನ್ನು ನೋಡಿ ಪಾಲಿಕೆಗೆ ದೂರು ನೀಡುತ್ತಿದ್ದರು. ಈ ರೀತಿ ಪ್ರಕರಣಗಳು ಹೆಚ್ಚಿದಾಗ ಅನುಮಾನ ಬಂದು, ವಾಣಿವಿಲಾಸ ವಾಟರ್ ವರ್ಕ್ಸ್ ಬಳಿ ಪ್ರಶ್ನಿಸಿದಾಗ, ಸಂಸ್ಥೆ 490 ಗ್ರಾಹಕರಿಂದ 1.25 ಕೋಟಿ ರೂ. ಪಡೆದಿರುವುದಾಗಿ ಪಾಲಿಕೆಗೆ ಮಾಹಿತಿ ನೀಡಿತ್ತು.
ವಜಾಗೊಂಡವರು ಯಾರು?: ಈ ಅಕ್ರಮದಲ್ಲಿ ಭಾಗಿಯಾಗಿದ್ದ ಹೆಚ್.ಬಿ.ಗಿರೀಶ್, ಸೈಫುಲ್ಲಾ, ಪಿ.ವಿವೇಕ್, ಎ.ವಿ.ಅಶೋಕ್ ಕುಮಾರ್, ಎಂ.ಪ್ರದೀಪ್ ಕುಮಾರ್, ಪಿ.ಜಯಶಂಕರ್, ಎಸ್.ಸಿ.ಮಧು ಕುಮಾರ್, ಸಿ.ಪಿ.ರಘು, ಟಿ.ಎಂ.ಸಿದ್ದೇಶ್, ಎಂ.ಮಲ್ಲೇಶ್, ಸಿ.ಕುಮಾರ್, ಆರ್.ಎಸ್.ದೇವೇಗೌಡ, ರಜೀಕ್ ಅಹಮ್ಮದ್, ಸಿ.ಎಂ.ಸಾಗರ್, ಎನ್.ಪ್ರವೀಣ್, ಲಿಂಗರಾಜು, ಎನ್.ಮೋಹನ್, ಕೆ.ಮಹೇಶ್, ಚನ್ನೇಗೌಡ, ಮಲ್ಲಿಕಾರ್ಜುನ್ ಅವರನ್ನು ಸೇವೆಯಿಂದ ವಜಾ ಮಾಡಿ, ಎಫ್ಐಆರ್ ದಾಖಲೆ ಮಾಡಲಾಗಿದೆ.