ಬಳ್ಳಾರಿ: ಸಂಡೂರು ತಾಲೂಕಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಅಪರಿಚಿತನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಘಟನೆ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆಂದು ಹತ್ತು ವರ್ಷಗಳ ಹಿಂದೆ ತೋರಣಗಲ್ಲಿಗೆ ಬಂದು ನೆಲೆಸಿದ್ದ ಉತ್ತರ ಭಾರತ ದಂಪತಿಯ ಮಗು ಸೋಮವಾರ ಮಕ್ಕಳೊಂದಿಗೆ ಮನೆ ಬಳಿ ಆಟವಾಡುತ್ತಿತ್ತು. ಮಗುವನ್ನು ಪುಸಲಾಯಿಸಿ ಕರೆದೊಯ್ದಿರುವ ದುಷ್ಕರ್ಮಿ ದೌರ್ಜನ್ಯ ಎಸಗಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದಾಳಿಯಿಂದಾಗಿ ಮಗುವಿಗೆ ಆಂತರಿಕ ಗಾಯವಾಗಿದ್ದು, ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಬಳ್ಳಾರಿಯ ಸರ್ಕಾರಿ ಆರೋಗ್ಯ ಸಂಸ್ಥೆಯೊಂದಕ್ಕೆ ಮಗುವನ್ನು ದಾಖಲಿಸಲಾಗಿದೆ ಎಂಬುದು ತಿಳಿದು ಬಂದಿದೆ. ಸೋಮವಾರ ರಾತ್ರಿಯೇ ಮಗುವಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಮಗು ಅಪಾಯದಿಂದ ಪಾರಾಗಿದೆ. ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೇರಳ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: 43 ಬಂಧನ, 5 ಠಾಣೆಗಳಲ್ಲಿ 29 ಎಫ್ಐಆರ್