ಬೆಂಗಳೂರು: ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ನಗರದ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇಗುಲದಲ್ಲಿ ಇಂದು ಸಂಜೆ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಲಿದೆ. ಈ ವಿಶೇಷ ಕೌತುಕ ಕಣ್ತುಂಬಿಕೊಳ್ಳಲೆಂದು ಭಕ್ತರು ದೇವಸ್ಥಾನದತ್ತ ಬರಲಾರಂಭಿಸಿದ್ದಾರೆ.
ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥಕ್ಕೆ ಸಂಚಲನ ಮಾಡಲಿದ್ದು, ಈ ವೇಳೆ ಸೂರ್ಯನ ಬೆಳಕು ನೇರವಾಗಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಮಾಡಲಿದೆ. ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ.
ವಿಶೇಷ ದಿನದ ಹಿನ್ನೆಲೆ ದೇವಸ್ಥಾನದಲ್ಲಿ ಹೋಮ, ಹವನಗಳು ನಡೆಯುತ್ತಿದ್ದು, ಬೆಳ್ಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿದೆ. ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ದೇವರ ದರ್ಶನ ಪಡೆಯುತ್ತಿದ್ದಾರೆ.
ದೇವಸ್ಥಾನದ ಹಿನ್ನೆಲೆ: ಬೆಂಗಳೂರಿನ ಗವಿ ಗಂಗಾಧರೇಶ್ವರ ಅಥವಾ ಶ್ರೀ ಗಂಗಾಧರೇಶ್ವರ ದೇವಾಲಯವು ವಿಶೇಷ ಕಲ್ಲಿನ ಕೆತ್ತನೆಯ ವಾಸ್ತುಶಿಲ್ಪವನ್ನು ಹೊಂದಿದೆ. ಸಂಕ್ರಾಂತಿಯಂದು ನಡೆಯುವ ಸೂರ್ಯರಶ್ಮಿ ಸ್ಪರ್ಶದಿಂದ ಸಾಕಷ್ಟು ಹೆಸರುವಾಸಿಯಾಗಿದೆ. ದೇಗುಲವನ್ನು ವೈದಿಕ ಕಾಲದಲ್ಲಿ ಗೌತಮ ಮಹರ್ಷಿ ಮತ್ತು ಭಾರದ್ವಾಜ ಮುನಿಯವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. 16ನೇ ಶತಮಾನದಲ್ಲಿ ಬೆಂಗಳೂರು ನಗರದ ಸಂಸ್ಥಾಪಕರಾದ ಕೆಂಪೇಗೌಡರು ನವೀಕರಿಸಿದ್ದುಂಟು. ಇಲ್ಲಿನ ವಾಸ್ತುಶಿಲ್ಪ ಅದ್ಭುತವಾಗಿದ್ದು, ನೈಸರ್ಗಿಕ ಗುಹೆಯ ಏಕಶಿಲೆಯ ಕಲ್ಲಿನಲ್ಲಿ ನಿರ್ಮಿಸಿರುವುದು ವಿಶೇಷ. ದೇವಾಲಯದ ಪ್ರಾಂಗಣವು ಹಲವು ಏಕಶಿಲಾ ಶಿಲ್ಪಗಳನ್ನು ಒಳಗೊಂಡಿದೆ.