ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ನಗರದ ಶಾಲೆಯೊಂದರ ಮುಂಭಾಗದ ಖಾಲಿ ಜಮೀನಿನಲ್ಲಿ ಮಾರ್ಚ್ 17ರಂದು ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ಳಂದೂರು ಠಾಣಾ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶಾಲೆಯ ಮುಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ವೊಂದರಲ್ಲಿ ಜಿಲೆಟಿನ್ ಕಡ್ಡಿಗಳು, ಎಲೆಕ್ಟ್ರಿಕಲ್ ಡಿಟೋನೇಟರ್ ಹಾಗೂ ಇತರ ಕೆಲವು ಸ್ಫೋಟಕಗಳು ದೊರೆತಿದ್ದು, ಆತಂಕಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ಬಂಡೆಗಳನ್ನು ಒಡೆಯಲು ಸ್ಫೋಟಕಗಳನ್ನು ತಂದಿರಿಸಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಸಿರುವ ಆರೋಪದಡಿ ಬೆಳ್ಳಂದೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸ್ಫೋಟ ಸಂಭವಿಸಿ ವಾರದ ಬಳಿಕ ರಾಮೇಶ್ವರಂ ಕೆಫೆ ಪುನರಾರಂಭ: ಮೆಟಲ್, ಹ್ಯಾಂಡ್ ಡಿಟೆಕ್ಟರ್ ಅಳವಡಿಕೆ