ದಾವಣಗೆರೆ: ಚನ್ನಗಿರಿ ನ್ಯಾಯಾಲಯದ ಆದೇಶದ ಅನುಸಾರ ಡಿಎನ್‌ಎ ಪರೀಕ್ಷೆಗಾಗಿ ಹೂತಿದ್ದ ಶವವನ್ನು ಅಧಿಕಾರಿಗಳು ಹೊರಕ್ಕೆ ತೆಗೆದಿದ್ದಾರೆ.
2020ರಲ್ಲಿ ಚನ್ನಗಿರಿ ತಾಲೂಕಿನ ಶಾಂತಿ ಸಾಗರ (ಸೂಳೆಕೆರೆ) ಬದಿಯಲ್ಲಿ ಅನಾಮಧೇಯ ಶವ ಎಂದು ಹೂತು ಹಾಕಲಾಗಿತ್ತು. ಈ ಅನಾಮಧೇಯ ಶವ ಭದ್ರಾನಾಲೆ ಮುಖಾಂತರ ನೀರಿನಲ್ಲಿ ತೇಲಿಕೊಂಡು ಬಂದಿತ್ತು. ಸುಮಾರು 40 ವರ್ಷ ವಯಸ್ಸಿನ ಮೃತದೇಹ ಅದಾಗಿತ್ತು. ಅನಾಮಧೇಯ ಶವ ಶಾಂತಿಸಾಗರ (ಸೂಳೆಕೆರೆ) ತಲುಪಿತ್ತು. ಅಂದು ಆ ಶವ ಗುರುತಿಸಲಾಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶವಸಂಸ್ಕಾರ ಮಾಡಿ ಕೈತೊಳೆದುಕೊಂಡಿದ್ದರು.
ಅದ್ರೆ ಕಾಣೆಯಾಗಿದ್ದ ಓರ್ವ ಮಹಿಳೆಗೆ ಮತ್ತು ಇಲ್ಲಿ ಹೂತುಹಾಕಿರುವ ಮೃತದೇಹಕ್ಕೆ ಸಾಮ್ಯತೆಯಾಗುವ ಶಂಕೆ ಹಿನ್ನೆಲೆ, ಶವ ಹೊರತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರತೋಳಲು ಕೈಮರದ ನಾಗರತ್ನಮ್ಮ ಕಾಣೆಯಾಗಿದ್ದಾರೆಂದು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಣೆಯಾದ ಮಹಿಳೆಯ ಭಾವಚಿತ್ರ, ಸೂಳೆಕೆರೆ ಸಮೀಪದ ಭದ್ರಾ ನಾಲೆಯಲ್ಲಿ ದೊರೆತ ಅನಾಮಧೇಯ ಶವ ಭಾಗಶಃ ಹೋಲಿಕೆಯಾಗುವ ಶಂಕೆ ಹಿನ್ನೆಲೆ, ಚನ್ನಗಿರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಡಿಎನ್ಎ ಪರೀಕ್ಷೆ ಮಾಡಲು ಆದೇಶಿಸಿದೆ. ಶುಕ್ರವಾರ ಈ ಶವ ಹೊರ ತೆಗೆಯಲಾಯಿತು.
ಇದನ್ನೂ ಓದಿ: 'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ
ನ್ಯಾಯಾಲಯದ ಆದೇಶದ ಹಿನ್ನೆಲೆ, ದಾವಣಗೆರೆ ಎಫ್ಎಸ್ಎಲ್ ತಜ್ಞರು ಮತ್ತು ಚಿಗಟೇರಿ ಆಸ್ಪತ್ರೆಯ ವೈದ್ಯರ ಸಮಕ್ಷಮದಲ್ಲಿ ಕಾರ್ಯಾಚರಣೆ ನಡೆಯಿತು. ಡಿಎನ್ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೃತದೇಹವನ್ನು ರವಾನಿಸಲಾಗಿದೆ. ಇದರ ವರದಿ ಬಂದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.