ಹಾಸನ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಇಲ್ಲಿನ ಬಿಯರ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದು, 9 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸನ ಹೊರವಲಯದ ಕೌಶಿಕಾ-ಅಂಬುಕಾ ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನ್ಯೂನತೆ ಕಂಡುಬಂದ ಪವರ್ ಕೂಲ್, ಲೆಜೆಂಡ್, ಬ್ಲಾಕ್‌ಫೋರ್ಟ್, ವುಡ್‌ಪೆಕರ್ ಬ್ರ್ಯಾಂಡ್ ಸೇರಿ ಒಟ್ಟು 56,236 ಬಾಕ್ಸ್‌ಗಳಲ್ಲಿದ್ದ 5,63,756.88 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ. ವುಡ್‌ಪೆಕರ್ ಡಿಸ್ಟಿಲರಿಸ್ ಪರವಾನಗಿದಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ನೀತಿ ಸಂಹಿತ ಜಾರಿಯಾದ ಬಳಿಕ ದಾಖಲಾದ ಪ್ರಕರಣಗಳೆಷ್ಟು?: ಮಾ.16 ರಿಂದ ಏ.6 ರವರೆಗೆ ಜಿಲ್ಲೆಯ ವಿವಿಧೆಡೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಒಟ್ಟು 944 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 3,488.185 ಲೀಟರ್ ಮದ್ಯ, 5,64,362 ಲೀಟರ್ ಬಿಯರ್, 34 ಲೀಟರ್ ವೈನ್, 14 ಲೀಟರ್ ಸೇಂದಿ ಸೇರಿದೆ. 51 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ಒಟ್ಟು 10,48,76,148 ರೂ ಮೌಲ್ಯದ ಮದ್ಯ ವಶಕ್ಕೆ ಪಡೆದು 970 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚಾಮರಾಜನಗರ ಡಿಸಿಗೆ ಬಂದ ಫೋನ್ ಕರೆ; 98 ಕೋಟಿ ಮೌಲ್ಯದ ಬಿಯರ್ ವಶ, ಫ್ಯಾಕ್ಟರಿ ಸೀಜ್ - FACTORY SEIZE