ಧಾರವಾಡ : ಕೋಲಾರದ ಐವರು ಕೈ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದಿದ್ದಾರೆ.
ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಮತ್ತು ಇತರರ ನಡುವೆ ಜಗಳವಿದೆ. ಸರ್ಕಾರ ಸರಿಯಾಗಿ ನಡೆಸಲು ಆಗುತ್ತಿಲ್ಲ. ಅನಗತ್ಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಶೇ.75ರಷ್ಟು ಎಸ್ಡಿಆರ್ಎಫ್ ಹಣ ಭಾರತ ಸರ್ಕಾರ ಕೊಡುತ್ತದೆ. ಆ ಹಣ ಹಂಚಿ ಬಿಡುಗಡೆ ಮಾಡಿಲ್ಲ. ಅದು ಬಿಟ್ಟು ಕೋರ್ಟ್ಗೆ ಹೋಗಿದ್ದಾರೆ ಎಂದು ಹರಿಹಾಯ್ದರು.
ಡಿಕೆಶಿ ದೇವಸ್ಥಾನ ಭೇಟಿ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು. ಅವರಿಗೆ ದೇವಸ್ಥಾನಗಳ ಮೇಲೆ ನಂಬಿಕೆ ಬಂದಿರೋದು ಒಳ್ಳೆಯದು. ಚುನಾವಣೆಯ ಸಂದರ್ಭದಲ್ಲಿ ಹಿಂದೂವನ್ನು ನಿರ್ಲಕ್ಷ್ಯ ಮಾಡಬಾರದು ಅನಿಸಿದೆ. ಹೀಗೆ ಕಾಂಗ್ರೆಸ್‌ಗೆ ಅನಿಸಿದ್ದೆ ಬಿಜೆಪಿಯ ಮೊದಲ ಜಯವಾಗಿದೆ ಎಂದು ತಿಳಿಸಿದರು.
ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನ ಕೊಡುತ್ತಿದ್ದೇವೆ. ಎಲ್ಲ ಇದ್ದರೂ ಸುಳ್ಳು ಸುದ್ದಿ ಜನರಿಗೆ ಹೇಳುತ್ತಿದ್ದಾರೆ. ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಅನಿಸುತ್ತಿದೆ. ಇದು ಜನರಿಗೆ ಮಾತ್ರವಲ್ಲ, ಪಕ್ಷದ ಶಾಸಕರಿಗೂ ಅನಿಸಿದೆ. ಮುಖ್ಯಮಂತ್ರಿ ಒಬ್ಬ ಅಶಕ್ತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಇದೇ ವೇಳೆ ಜೋಶಿ ಆರೋಪಿಸಿದರು.
ಎಲೆಕ್ಟ್ರೋರಲ್ ಬಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಸರ್ಕಾರದಲ್ಲಿತ್ತು. ಆಗ ಎಲ್ಲ ಕ್ಯಾಶ್‌ನಲ್ಲಿಯೇ ನಡೆಯುತ್ತಿತ್ತು. ಆಗ ಪ್ರಾಮಾಣಿಕವಾಗಿ ಚುನಾವಣೆ ನಡೆಸುತ್ತಿದ್ದರಾ? ನಾವು ಕಪ್ಪು ಹಣವನ್ನಾದರೂ ಚುನಾವಣೆಯಿಂದ ದೂರ ಇಟ್ಟಿದ್ದೇವೆ. ಬಾಂಡ್ ಕೊಡಲು ಚೆಕ್ ಮೂಲಕ ಹಣ ಕೊಡಬೇಕಾಗುತ್ತದೆ. ಇದು ನಮ್ಮ ಮೊದಲ ಹೆಜ್ಜೆಯಾಗಿತ್ತು. ಈಗ ಸುಪ್ರೀಂಕೋರ್ಟ್ ಹೇಳಿದ್ದನ್ನು ಮಾನ್ಯ ಮಾಡುತ್ತೇವೆ. ಕಾಂಗ್ರೆಸ್‌ಗೆ 1600 ಕೋಟಿ ಬಂದಿದೆಯಲ್ಲ. ಅದು ಎಲ್ಲಿಂದ ಬಂದಿದೆ. ನೀವು ತಗೊಂಡ್ರೆ ಸಾಚಾಗಳಾ? ನಾವು ಸುಧಾರಣೆ ಮಾದರಿಯಲ್ಲಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಪಾಲನೆ ಮಾಡಿಕೊಂಡು ಹೋಗುತ್ತೇವೆ ಎಂದರು.
ಕಾಂಗ್ರೆಸ್ ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿತ್ತಲ್ಲ. ಆಗ ನೀವು ಎಷ್ಟು ತಗೊಂಡಿದ್ರಿ. ಎಂಗ್ ಇಂಡಿಯಾ ಕೇಸ್ನಲ್ಲಿ ರಾಹುಲ್, ಸೋನಿಯಾ ಗಾಂಧಿ ಬೇಲ್ ಮೇಲೆ ಇದಾರಲ್ಲ? ಇದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಪಸೆ ಕುಟುಂಬ ಸದಸ್ಯರಿಗೆ ಸಾಂತ್ವನ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನದ ಹಿನ್ನೆಲೆ ಅವರ ನಿವಾಸಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಂತಿಮ ದರ್ಶನ ಪಡೆದುಕೊಂಡರು. ಇದಾದ ನಂತರ ಜೋಶಿ ಕಾಪಸೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಂತಿಮ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಗುರುಲಿಂಗ ಕಾಪಸೆಯವರು ಹಿರಿಯ ಸಾಹಿತಿಗಳು. ಅವರು ನಮ್ಮನ್ನು ಅಗಲಿದ್ದಾರೆ. ಪ್ರಸ್ತುತ ಇದ್ದ ಅತ್ಯಂತ ಹಿರಿಯ ಸಾಹಿತಿಯಾಗಿದ್ದರು. ಕವಿವಿ ಪ್ರಾಧ್ಯಾಪಕರಾಗಿದ್ದರು. ಹಲವಾರು ಪುಸ್ತಕ ರಚಿಸಿದ್ದರು. ಸಾಹಿತ್ಯ ಪ್ರಿಯರಿಗೆ ಪ್ರೀತಿ ಪಾತ್ರರಾದವರು. ಸಾವಿನಲ್ಲಿಯೂ ಅವರು ಸಾರ್ಥಕತೆ ಮೆರೆದಿದ್ದಾರೆ. ಮರಣಾನಂತರ ದೇಹದಾನ ಮಾಡಿದ್ದಾರೆ. ಅವರು ಕನ್ನಡಕ್ಕೆ ಮಾಡಿದ ಸೇವೆ ಅಪಾರ. ಅವರನ್ನು ಧಾರವಾಡ ಜನ ಸದಾಕಾಲ ನೆನಪಿಡುತ್ತಾರೆ. ನಾನು ವೈಯಕ್ತಿಕ, ಭಾರತ ಸರ್ಕಾರ, ಮೋದಿಯವರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುವೆ ಎಂದರು.
ಇದನ್ನೂ ಓದಿ : ಕೋಲಾರ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಭಿನ್ನಮತ ಸ್ಫೋಟ; ವಿಧಾನಸೌಧದಲ್ಲಿ ರಾಜೀನಾಮೆ ಹೈಡ್ರಾಮ - KOLAR TICKET ISSUE