ಬೆಂಗಳೂರು: ''ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಅಭ್ಯರ್ಥಿ ಅಂತ ಎಲ್ಲರಿಗೂ ಗೊತ್ತಿತ್ತು. ಡ್ರಾಮಾ ಇನ್ನು ಮೇಲೆ ಶುರುವಾಗುತ್ತದೆ'' ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಎಲ್ಲರಿಗೂ ಅವರೇ ಅಭ್ಯರ್ಥಿ ಆಗ್ತಾರೆಂದು ಗೊತ್ತಿತ್ತು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಬಲವಂತವಾಗಿ ನಿಲ್ಲಿಸುತ್ತಿದ್ದಾರೆ ಎಂಬುದು ಸುಳ್ಳು. ಅವರ ಪಕ್ಷಕ್ಕೆ ಅವರೇ ಅಧಿನಾಯಕರು. ರಾಜ್ಯದ ಜನರಿಗೆ ಅವರ ಉದ್ದೇಶ ಗೊತ್ತಿದೆ. ಅವರದೇ ಆದ ತಂತ್ರಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ'' ಎಂದರು.
''ಚುನಾವಣೆ ನಡೆಯುತ್ತವೆ ಹೋಗುತ್ತವೆ. ನಮಗೆ ಎಲ್ಲ ಚುನಾವಣೆಗಳೂ ಪ್ರಮುಖವೇ. ಒಂದೊಂದು ಮತಗಳೂ ಮುಖ್ಯ. ನಾವು ಗೆಲ್ಲುವುದಕ್ಕೆ ಹೋರಾಟ ಮಾಡುತ್ತೇವೆ. ನಮ್ಮ ಕಾರ್ಯಕರ್ತರಲ್ಲಿ ಯಾವುದೇ ಅಸಮಾಧಾನವಿಲ್ಲ'' ಎಂದು ಸ್ಪಷ್ಟಪಡಿಸಿದರು.
ದೇವೇಗೌಡರು ಪ್ರಚಾರ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಅವರು ಇರೋದೇ ಕ್ಯಾಂಪೇನ್ ಮಾಡುವುದಕ್ಕೆ. ಮೊಮ್ಮಗನ ಪರ ಕ್ಯಾಂಪೇನ್ ಮಾಡುತ್ತಾರೆ'' ಎಂದರು. ಚನ್ನಪಟ್ಟಣ ಚುನಾವಣೆಯ ಸಾರಥ್ಯ ಬಗ್ಗೆ ಮಾತನಾಡಿ, ''ಯಾರಾದರೂ ಒಬ್ಬರು ಸಾರಥಿಯಾಗಬೇಕಲ್ಲ. ಅದರ ಹೊಣೆಯನ್ನು ನಾನೇ ಹೊರುತ್ತೇನೆ'' ಎಂದು ಇದೇ ವೇಳೆ ತಿಳಿಸಿದರು.
ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ: ಎಂಟು ಬಿಜೆಪಿ ಶಾಸಕರು ಕಾಂಗ್ರೆಸ್ ಬರುತ್ತಾರೆಂಬ ಎಸ್.ಟಿ.ಸೋಮಶೇಖರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಆತುರದ ನಡವಳಿಕೆ ಇರಬಹುದೇನೋ?. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಸರ್ಕಾರಕ್ಕೆ ಸಂಖ್ಯೆಯ ಅವಕಾಶವಿಲ್ಲ. ಬೇರೆಯವರು ಬಂದರೆ ಸ್ವಾಗತ ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರದ ಸೋಲಿನ ನಂತರ ಖುಷಿಯಾಗಿದ್ದೇನೆ. ಅದೇನು ನಮ್ಮಪ್ಪನ ಆಸ್ತಿಯೇ?. ಸಾರ್ವಜನಿಕರು ಕೊಟ್ಟ ಕೊಡುಗೆ. ಅವರ ಸೇವೆ ಮಾಡಿದ್ದೇನೆ. ನಾನು ಮುಕ್ತ ಕಂಠದಿಂದ ಸ್ವಾಗತ ಮಾಡ್ತೇನೆ'' ಎಂದರು.
ಬೊಮ್ಮಾಯಿ, ಕುಮಾರಸ್ವಾಮಿ ತಮ್ಮ ಮಕ್ಕಳನ್ನೇ ಯಾಕೆ ನಿಲ್ಲಿಸಿದ್ರು?: ಶಿಗ್ಗಾಂವಿ ಕಾಂಗ್ರೆಸ್ ಬಂಡಾಯ ವಿಚಾರವಾಗಿ ಮಾತನಾಡಿ, ''ಅಲ್ಲಿ ನಮ್ಮ ನಾಯಕರು ಇದ್ದಾರೆ. ಅವರನ್ನು ಸಮಾಧಾನ ಮಾಡುತ್ತಾರೆ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಎಂದ ಅವರು, ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂಬ ಒತ್ತಾಯ ವಿಚಾರವಾಗಿ ಮಾತನಾಡಿ, ''ಬೊಮ್ಮಾಯಿ, ಕುಮಾರಸ್ವಾಮಿ ಮಕ್ಕಳನ್ನೇ ಯಾಕೆ ನಿಲ್ಲಿಸಿದರು?. ಅಲ್ಲಿ ಕಾರ್ಯಕರ್ತರು ಇರಲಿಲ್ಲವೇ?. ಪಕ್ಷದ ವರಿಷ್ಠರು ತೆಗೆದುಕೊಂಡ ತೀರ್ಮಾನ. ಜಾತ್ಯಾತೀತ ತತ್ವ ಉಳಿಸಿಕೊಳ್ಳಲು ಹೊರಟಿದ್ದೇವೆ. ಅಡ್ಜೆಸ್ಟ್ಮೆಂಟ್ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಅಧ್ಯಕ್ಷರನ್ನು ಕೇಳಬೇಕು. ಪ್ರಯೋಗ ಶಾಲೆ ಮಾಡುವುದಕ್ಕೆ ಆಗಲ್ವಲ್ಲಾ?. ಸೋತವರಿಗೆ ಟಿಕೆಟ್ ಕೊಡಬಾರದು ಅಂತ ಇದೆಯಾ'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಶಕ್ತಿ ಪ್ರದರ್ಶನದ ಮೂಲಕದ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ