ಚಿಕ್ಕೋಡಿ (ಬೆಳಗಾವಿ) : ಉತ್ತರ ಕರ್ನಾಟಕ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ರೈತರು ಹಠಕ್ಕೆ ಬಿದ್ದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಅಡಿ ಬೋರ್ವೆಲ್ ಕೊರೆಸುವುದು ಕಂಡುಬರುತ್ತದೆ. ಅನೇಕ ಬಾರಿ ಬಹುತೇಕ ಕೊಳವೆ ಬಾವಿಗಳಿಗೆ ಒಂದು ಹನಿ ನೀರು ಬಾರದೇ ರೈತರಿಗೆ ನಿರಾಸೆ ಮೂಡಿಸಿದ ಉದಾಹರಣೆಗಳಿವೆ. ಆದರೆ ಬೆಳಗಾವಿ ರೈತರು ಫೇಲಾದ ಬೋರ್ವೆಲ್ಗೆ ಮರು ರಿಚಾರ್ಜ್ ಮಾಡಿ 150ಕ್ಕೂ ಹೆಚ್ಚು ಕೊಳವೆ ಬಾವಿಯಲ್ಲಿ ನೀರು ಬರುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತರು ಏತ ನೀರಾವರಿ ಯೋಜನೆಯ ನೀರನ್ನ ಹಳ್ಳದ ಮುಖಾಂತರವಾಗಿ ನಿಷ್ಕ್ರಿಯಗೊಂಡ ಕೊಳವೆ ಬಾವಿಗೆ ಹರಿಸಿದ್ದಾರೆ. ಇದರಿಂದಾಗಿ ಅದರ ಸುತ್ತಲೂ ಒಂದು ಕಿಲೋಮೀಟರ್ ದೂರದ 150ಕ್ಕೂ ಹೆಚ್ಚು ಬೋರ್ವೆಲ್ಗಳಿಗೆ ಸಮರ್ಪಕವಾಗಿ ನೀರು ಬರುತ್ತಿದೆ. ಕೆಲವು ಕೊಳವೆಬಾವಿಯಲ್ಲಿ 30 ಅಡಿಯಷ್ಟು ಅಂತರಕ್ಕೆ ನೀರು ಚಿಮ್ಮುತ್ತಿದೆ.
ಕಳೆದ 20 ವರ್ಷದ ಹಿಂದೆ ರೈತ ವಿಜಯ ಅಣ್ಣಪ್ಪ ಗುಜರೆ ಅವರು ಹಳ್ಳದ ಪಕ್ಕದಲ್ಲಿ 300 ಅಡಿಯ ಒಂದು ಕೊಳವೆಬಾವಿ ಕೊರೆಸಿದ್ದರು. ಅವತ್ತು ಆ ಬೋರ್ವೆಲ್ಗೆ ಒಳ್ಳೆ ನೀರು ಬಂದರೂ ಕ್ರಮೇಣವಾಗಿ ಹನಿ ನೀರು ಬಾರದೇ ರೈತರಲ್ಲಿ ನಿರಾಸೆ ಮೂಡಿಸಿತ್ತು.
ಕೊಳವೆ ಬಾವಿಯಲ್ಲಿ ಹೆಚ್ಚಿದ ನೀರು : ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನೀರಾವರಿ ತಜ್ಞರು ಬೋರ್ವೆಲ್ ರಿಚಾರ್ಜ್ ಬಗ್ಗೆ ನೀಡಿದ ಮಾಹಿತಿಯನ್ನು ರೈತರು ನೋಡಿದ್ದಾರೆ. ನಂತರ ಹಳ್ಳದ ದಂಡೆಯ ಪಕ್ಕದ ಕೊಳವೆಬಾವಿಗೆ ಹೆಚ್ಚುವರಿಯಾಗಿ ಹರಿದು ಬರುತ್ತಿರುವ ಏತ ನೀರಾವರಿ ಯೋಜನೆ ನೀರನ್ನು ಆ ಬೋರ್ವೆಲ್ನಲ್ಲಿ ಬಿಟ್ಟಿದ್ದರಿಂದ ಒಂದೆರಡು ದಿನದಲ್ಲಿ ಅಕ್ಕಪಕ್ಕದ ಜಮೀನಿನ ಕೊಳವೆ ಬಾವಿಯಲ್ಲಿ ಗಣನೀಯವಾಗಿ ನೀರು ಹೆಚ್ಚಳವಾಗಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ರೈತ ವಿಜಯ ಅಪ್ಪಣ್ಣ ಗುಜರೆ, 'ನಾವು ಬಯಲು ಸೀಮೆಯ ಜನರು. ಈ ಭಾಗದಲ್ಲಿ ಸರ್ಕಾರ ನಮಗೆ ಯಾವುದೇ ಏತ ನೀರಾವರಿ ಯೋಜನೆ ಕಾಮಗಾರಿ ಮಾಡಿಲ್ಲ. ಇದರಿಂದ ನಾವು ಕೃಷಿ ಚಟುವಟಿಕೆಗಳಿಗೆ ನೀರು ಇಲ್ಲದೆ ಪರದಾಟ ಮಾಡುತ್ತಿದ್ದೇವೆ. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡು ಈ ಭಾಗದಲ್ಲಿ ಮಳೆಗಾಲ ಕಡಿಮೆಯಾಗಿ ಕೃಷಿ ಚಟುವಟಿಕೆ ನಿಂತಿದೆ. ಕುಡಿಯೋ ನೀರಿಗಾದರು ಬೋರ್ವೆಲ್ ಕೊರೆಯುತ್ತಿದ್ದೇವೆ' ಎಂದಿದ್ದಾರೆ.
ಈ ಬಗ್ಗೆ ಯುವ ರೈತ ಚೇತನ್ ಗುಜರೆ ಮಾತನಾಡಿ, 'ಈ ಬೋರ್ವೆಲ್ನಲ್ಲಿ ನೀರು ಹರಿಸಿದ ಪರಿಣಾಮ ನಮಗೆ ಹತ್ತು ತಿಂಗಳು ನಡೆಯುವಷ್ಟು ಭೂಮಿಯಲ್ಲಿ ನೀರು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಕೆಲವು ಕೊಳವೆ ಬಾವಿಯಲ್ಲಿ ಗಣನೀಯವಾಗಿ ನೀರು ಹೆಚ್ಚಳವಾಗಿ ಈ ರೀತಿ ಗಂಗೆ ಮೇಲೆ ಚಿಮ್ಮುತ್ತಾಳೆ. ಸರ್ಕಾರ ಈ ಹಳ್ಳಕ್ಕೆ ಅಡ್ಡಲಾಗಿ ಒಂದು ಬಾಂದಾರ ನಿರ್ಮಾಣ ಮಾಡಿ ಕೊಡಬೇಕು. ಇದರಿಂದ ಮತ್ತಷ್ಟು ಅಂತರ ಜಲ ಹೆಚ್ಚಾಗುತ್ತದೆ' ಎಂದು ಈ ಭಾಗದ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.