ಶಿವಮೊಗ್ಗ: ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಅಂತಾನೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ನನಗೆ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ ಫೋನ್ ಮಾಡಿ ದೆಹಲಿಗೆ ಬರುವಂತೆ ತಿಳಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಸಹ ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದರು. ಹಾಗಾಗಿ ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದೆ. ನಂತರ ಅಲ್ಲಿ ಹೋಗಿ ಕರೆ ಮಾಡಿದಾಗ ಶಾ ಅವರು ಮನೆಯಲ್ಲಿ ಇಲ್ಲ, ಬಂದ ನಂತರ ತಿಳಿಸುವುದಾಗಿ ಹೇಳಿದ್ದರು. ಮತ್ತೊಮ್ಮೆ ಕರೆ ಮಾಡಿದಾಗ ಶಾ ಅವರು ನಿಮ್ಮನ್ನು ಭೇಟಿ ಮಾಡುವುದಿಲ್ಲವಂತೆ ಎಂದು ತಿಳಿಸಿದರು. ನಾನು ವಾಪಸ್ ಹೋಗಬಹುದೇ ಎಂದು ಕೇಳಿದೆ, ಅವರು ಆಯ್ತು ಎಂದರು. ಈ ಮೂಲಕ ನಾನು ಚುನಾವಣೆಯಲ್ಲಿ ನಿಂತು ಗೆಲ್ಲಬೇಕೆಂದು ಅವರೇ ಆಶೀರ್ವಾದ ಮಾಡಿದಂತೆ ಆಗಿದೆ. ಇದರಿಂದ ನಾನು ವಾಪಸ್ ಬಂದಿದ್ದೇನೆ ಎಂದರು.
ಅವರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ಘಟಕದ ಸಮಸ್ಯೆಯನ್ನು ತಿಳಿಸುವವನಿದ್ದೆ. ಅವರು ನನಗೆ ಭೇಟಿಗೆ ಅವಕಾಶ ನೀಡಿದ್ದರೇ, ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿರಲಿಲ್ಲವೇನೂ. ಇದರಿಂದ ಅವರು ನನ್ನ ಭೇಟಿ ಮಾಡಿಲ್ಲವೇನೂ. ನಾನು ಇಂಧನ ಸಚಿವನಾದಾಗ ಮಂತ್ರಿ ಸ್ಥಾನ ಬಿಟ್ಟು ರಾಜ್ಯ ಬಿಜೆಪಿ ಅಧ್ಯಕ್ಷರಾಗಬೇಕೆಂದು ಹೇಳಿದಾಗ ಅವರ ಮಾತನ್ನು ಕೇಳಿದ್ದೆ. ಈಗ ಅವರು ಭೇಟಿ ಮಾಡದೆ ಇರುವುದು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಅವರ ಮನಸ್ಸಿನಲ್ಲಿಯೂ ಇದೆ ಎಂದು ತಿಳಿಸಿದರು. ನನಗೆ ದೆಹಲಿಯಿಂದ ಮತ್ತೆ ಕರೆ ಬಂದರೆ ಹೋಗುತ್ತೇನೆ. ಹಿರಿಯರು ಕರೆದರೆ ಹೋಗಬೇಕಾಗುತ್ತದೆ. ಆದರೆ ನನಗೆ ಕರೆ ಬರಲ್ಲ ಎಂದೆನ್ನಿಸುತ್ತದೆ ಎಂದು ಈಶ್ವರಪ್ಪ ತಿಳಿಸಿದರು.
ಈಶ್ವರಪ್ಪನವರನ್ನು ವರಿಷ್ಠರು ಮನವೊಲಿಸುತ್ತಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಸೋಲಿನ ಭೀತಿಯಿಂದ ಮನವೊಲಿಸುತ್ತಾರೆ ಎಂದು ಹೀಗೆ ಹೇಳುತ್ತಿದ್ದಾರೆ. ವಿಜಯೇಂದ್ರ ಇದೇ ರೀತಿ ಮಾತನಾಡಿದ್ರೆ, ಮುಂದೆ ಬೇರೆ ರೀತಿಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಗರಂ ಆದರು.
ಮೋದಿ ಫೋಟೋ ಬಳಸಿ ಪ್ರಚಾರದ ಕುರಿತು ರಾಘವೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೋದಿ ಏನೂ ಅವರ ಆಸ್ತಿಯೇ. ನನ್ನ ಹೃದಯದಲ್ಲಿ ಮೋದಿ ಇದ್ದಾರೆ. ಅವರು ವಿಶ್ವ ನಾಯಕ, ಅವರ ಫೋಟೋವನ್ನು ಎಲ್ಲರೂ ಬಳಸಿಕೊಳ್ಳಬುಹುದು ಎಂದು ಈಶ್ವರಪ್ಪ ಹೇಳಿದರು.