ಹುಬ್ಬಳ್ಳಿ: ಕೆ.ಎಸ್. ಈಶ್ವರಪ್ಪ ಅವರು ಬಹಳ ಹಿರಿಯರು, ಪಕ್ಷದ ಹಿತದೃಷ್ಟಿಯಿಂದ ಅವರ ಜೊತೆಗೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಅಸಮಾಧಾನ ಶಮನ ಮಾಡಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಅವರ ಜೊತೆ ಮಾತನಾಡುತ್ತೇನೆ. ಈಶ್ವರಪ್ಪ ಅವರಿಗೂ ನಮಗೂ ಆತ್ಮೀಯವಾದ ಸಂಬಂಧವಿದೆ. ನಾನು ಅವರ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಹಾವೇರಿ ಕ್ಷೇತ್ರ ಕೈತಪ್ಪಿರಬಹುದು. ಇದು ಪಕ್ಷದ ನಿರ್ಣಯ. ಈಶ್ವರಪ್ಪ ಅವರು ನಮಗಿಂತ ಬಹಳ ಹಿರಿಯರು, ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ. ಹೀಗಾಗಿ ಪಕ್ಷದ ವಿರುದ್ಧ ಅವರು ಹೋಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ಈ ಹಿಂದೆ ಈಶ್ವರಪ್ಪ ಅವರು ರಾಜ್ಯಾಧ್ಯಕ್ಷ ಆಗಿದ್ದಾಗ, ನಾನು ಜಿಲ್ಲಾಧ್ಯಕ್ಷನಾಗಿದ್ದೆ, ಅವರು ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯವನ್ನು ಮಾನ್ಯ ಮಾಡುತ್ತಾರೆಂಬ ನಂಬಿಕೆಯಿದೆ. ಇನ್ನೂ ಬಹಳ ಸಮಯವಿದ್ದು ತಮ್ಮ ನಿರ್ಧಾರ ಬದಲಿಸಲಿದ್ದಾರೆ. ಸದ್ಯ ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿದ್ದು, ನಾನು ಕೂಡ ಕಲಬುರ್ಗಿಗೆ ಹೋಗುತ್ತಿದ್ದೇನೆ ಎಂದು ಜೋಶಿ ತಿಳಿಸಿದರು.
ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಶೆಟ್ಟರ್ ಅವರು ಬೆಳಗಾವಿಯಲ್ಲಿ ಅತಿಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರಿಗೆ ನಾನು ಶುಭಕೋರುತ್ತೇನೆ. ಅಲ್ಲಿನ ಸ್ಥಳೀಯಮಟ್ಟದ ವಿರೋಧವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಹಾವೇರಿಯಿಂದ ಸ್ಪರ್ಧೆ: ಮಾಜಿ ಸಿಎಂ ಬೊಮ್ಮಾಯಿ