ಬೆಂಗಳೂರು: ಮುಡಾ ನಿವೇಶನ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಬೆನ್ನಲ್ಲೇ ಇಂದು ನಿಗದಿಯಾಗಿದ್ದ ತುರ್ತು ವಿಶೇಷ ಸಚಿವ ಸಂಪುಟ ಸಭೆಯು ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬಗ್ಗೆ ಚರ್ಚೆ ಹಾಗೂ ಪ್ರಾಸಿಕ್ಯೂಷನ್ ಪ್ರಕ್ರಿಯೆ ಖಂಡಿಸಿ ನಿರ್ಣಯ ಕೈಗೊಳ್ಳುವ ಬಗ್ಗೆ ಈ ಸಭೆ ನಡೆಯಬೇಕಿತ್ತು. ಜೊತೆಗೆ, ಮುಂದೆ ಕೈಗೊಳ್ಳಬೇಕಾದ ಕಾನೂನು ಹೋರಾಟ, ಮುಂದಿನ ನಡೆ ಸಂಬಂಧ ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ಆಗಬೇಕಿತ್ತು. ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ಯಾವ ರೀತಿ ಕಾನೂನು ಹೋರಾಟ ಮಾಡಬೇಕು, ಸರ್ಕಾರದ ಮುಂದಿನ ನಡೆ ಏನಾಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿತ್ತು.
ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಪೂರ್ವಾನುಮತಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿಸಿದ್ದಾರೆ.
ಆಗಸ್ಟ್ 1ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೋಟಿಸ್ ಹಿಂಪಡೆಯುವಂತೆ ಮತ್ತು ಡಿ.ಜೆ. ಅಬ್ರಾಹಂ ದೂರನ್ನು ತಿರಸ್ಕರಿಸಬೇಕು ಎಂದು ಕೋರಿ ನಿರ್ಣಯ ಕೈಗೊಂಡಿತ್ತು. ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ರಾಜ್ಯಪಾಲರಿಗೆ ರವಾನಿಸಲಾಗಿತ್ತು.