ಮೈಸೂರು : ಒಂಟಿಸಲಗವೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ಮಾಡಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಹಳ್ಳಿಯ ಅರಣ್ಯ ವಲಯದ ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಹೀಗಾಗಿ ಗ್ರಾಮಸ್ಥರೇ ಒಂಟಿಸಲಗವನ್ನ ಮತ್ತೆ ಕಾಡಿಗೆ ಅಟ್ಟಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಪ್ರತಿದಿನ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಅಲ್ಲದೇ ತಮ್ಮ ಜಾನುವಾರುಗಳಿಗೂ ತೊಂದರೆ ಆಗುತ್ತಿದ್ದು, ಜೊತೆಗೆ ರೈತರು ಬೆಳೆದ ಬೆಳೆಗಳು ಸಹ ನಾಶವಾಗುತ್ತಿವೆ.
ಅರಣ್ಯ ಇಲಾಖೆಗೆ ಕಾಡುಪ್ರಾಣಿಗಳ ಉಪಟಳ ಪ್ರತಿದಿನ ತಲೆನೋವಾಗಿ ಪರಿಣಮಿಸಿದೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಕಷ್ಟು ಕಾಡುಪ್ರಾಣಿಗಳನ್ನ ವಾಪಸ್ ಕಾಡಿಗೆ ಅಟ್ಟುತ್ತಿದ್ದಾರೆ. ಜೊತೆಗೆ ಕಾಡಂಚಿನ ಗ್ರಾಮಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರ ಮಧ್ಯೆ ಆಗಾಗ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ದಾಳಿ ಮಾಡುತ್ತಲೇ ಇರುತ್ತವೆ.
ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಹಳ್ಳಿ ಅರಣ್ಯವಲಯದ ಹೊಸಹಳ್ಳಿ ಗ್ರಾಮಕ್ಕೆ ಸೋಮವಾರ ಸಂಜೆ ಒಂಟಿ ಸಲಗವೊಂದು ಆಹಾರ ಅರಸಿ ಬಂದಿದ್ದು, ಗ್ರಾಮದಲ್ಲಿ ಕೆಲವು ನಾಯಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಆಗ ಹೊಸಹಳ್ಳಿ ಗ್ರಾಮಸ್ಥರು ಆನೆಯನ್ನು ಓಡಿಸಲು ಪ್ರಯತ್ನಪಟ್ಟಿದ್ದು, ಆಗ ಆನೆ ಬೈಕ್ವೊಂದನ್ನ ಜಖಂ ಮಾಡಿದೆ.
ಒಂಟಿ ಸಲಗ ಗ್ರಾಮಕ್ಕೆ ನುಗ್ಗಿರುವ ಈ ವಿಚಾರವನ್ನ ಅರಣ್ಯ ಇಲಾಖೆಗೆ ತಿಳಿಸಿದ್ದು, ಅರಣ್ಯ ಸಿಬ್ಬಂದಿ ಬರುವುದು ತಡವಾಗಿದ್ದರಿಂದ ಗ್ರಾಮಸ್ಥರೇ ಒಂಟಿಸಲಗವನ್ನ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಗ್ರಾಮಸ್ಥ ದೇವರಾಜು, ಪ್ರತಿನಿತ್ಯ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದರೆ ಒಳ್ಳೆಯದು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ - Elephant Attack