ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಣ್ಣಮಾದ (72) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕರಳಕಟ್ಟೆ ಗ್ರಾಮದಲ್ಲಿ ಬೆಳಗ್ಗೆ 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.
ಸಣ್ಣಮಾದ ಅವರು ತಮ್ಮ ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಅವರೊಂದಿಗೆ ಕರಳಕಟ್ಟೆ ಸಮೀಪದ ಮೇಗಲದೊಡ್ಡಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದಾರಿಯಲ್ಲಿ ನಿಂತಿದ್ದ ಆನೆ ದಾಳಿ ನಡೆಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಸಣ್ಣಮಾದ ಓಡಲು ಪ್ರಾರಂಭಿಸಿದ್ದಾರೆ. ಆದರೆ ಅಟ್ಟಾಡಿಸಿಕೊಂಡು ಹಿಂಬಾಲಿಸಿದ ಆನೆ ಅವರ ತೊಡೆ, ಕಾಲನ್ನು ತುಳಿದು ಸಾಯಿಸಿದೆ. ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣೆ ಪಿಎಸ್‍ಐ ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಪರಿಹಾರಕ್ಕೆ ಒತ್ತಾಯ: ಘಟನಾ ಸ್ಥಳಕ್ಕೆ ಎಸಿಎಫ್ ನಂದಕುಮಾರ್ ಆಗಮಿಸಿದ ವೇಳೆ ಮೃತನ ಸಂಬಂಧಿಕರು, ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. "ಕರಳಕಟ್ಟೆ ಗ್ರಾಮವು ಕಾಡಿನ ಅಂಚಿನಲ್ಲಿರುವುದ್ದರಿಂದ ಇಲ್ಲಿ ವಾಸಿಸುವ ಜನರಿಗೆ ಯಾವುದೇ ರಕ್ಷಣೆಯಿಲ್ಲ. ಕಳೆದ ತಿಂಗಳಿನಿಂದ ಎರಡು ಕಾಡಾನೆಗಳು ಬರುತ್ತಿವೆ. ಜಿಂಕೆ, ಕಾಡು ಹಂದಿಗಳು ಬೆಳೆ ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ನೌಕರ ನಂಜುಂಡಸ್ವಾಮಿ ಎಂಬವರಿಗೆ ಹಲವು ಬಾರಿ ಮಾಹಿತಿ ನೀಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅಕ್ರೋಶ ಹೊರಹಾಕಿದರು.
ಎಸಿಎಫ್ ನಂದಕುಮಾರ್ ಮಾತನಾಡಿ, "ಕಾಡಾನೆ ದಾಳಿಗೆ ಮನುಷ್ಯ ಮೃತಪಟ್ಟರೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ ಸಿಗುತ್ತದೋ ಅದನ್ನು ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ" ಎಂದು ಭರವಸೆ ನೀಡಿದರು.
ಇದನ್ನೂಓದಿ: ಮೈಸೂರು: ಆನೆ ದಾಳಿಗೆ ಅರಣ್ಯ ಇಲಾಖೆ ವೀಕ್ಷಕ ಬಲಿ