ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಜಲಕ್ಷಾಮ ಹೆಚ್ಚಾಗುತ್ತಿದೆ. ಬಿಬಿಎಂಪಿ ಜಲಮಂಡಳಿ ಮತ್ತು ಸರ್ಕಾರ ನೀರು ಸರಬರಾಜು ಮಾಡುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ನೀರಿನ ಬಿಕ್ಕಟ್ಟು ಉಂಟಾಗಿರುವುದು ಸರ್ಕಾರಕ್ಕೂ ತಲೆನೋವಾಗಿದೆ.
ಈಗ ನೀರಿಲ್ಲದೇ ಬಿಬಿಎಂಪಿಯ ಇ-ಟಾಯ್ಲೆಟ್ ಹಾಗೂ ಸಾರ್ವಜನಿಕರ ಶೌಚಾಲಯಗಳನ್ನು ಬಂದ್ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯ 241 ವಾರ್ಡ್ಗಳ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 800 ಶೌಚಾಲಯಗಳಿವೆ. ಮುಖ್ಯವಾಗಿ ಸಿಲಿಕಾನ್ ಸಿಟಿ ಜನರ ಅನುಕೂಲಕ್ಕಾಗಿ ನಾನಾಭಾಗದಲ್ಲಿ ಬ್ರಾಂಡ್ ಬೆಂಗಳೂರಿನ ಹೆಸರಲ್ಲಿ ಇ-ಟಾಯ್ಲೆಟ್ ನಿರ್ಮಾಣವನ್ನು ಬಿಬಿಎಂಪಿ ಮಾಡಿತ್ತು. ನಿರೀಕ್ಷೆಗೂ ಮೀರಿ ಶೌಚಾಲಯಗಳನ್ನು ಶುಚಿ ಇಡಲಾಗುತ್ತಿತ್ತು. ಆದ್ರೆ ಈಗ ಟಾಯ್ಲೆಟ್ಗಳನ್ನು ಸ್ವಚ್ಛವಾಗಿಡಲು ಕೂಡ ನೀರಿಲ್ಲದ ಕಾರಣ ಮುಚ್ಚಲಾಗುತ್ತಿದೆ.
ನಗರದ ಅನೇಕ ಕಡೆಯಲ್ಲಿ ನೀರಿನ ಅಭಾವದಿಂದ ಇ-ಟಾಯ್ಲೆಟ್ ಮತ್ತು ಸಾರ್ವಜನಿಕರ ಶೌಚಲಯಗಳ ಬಾಗಿಲು ಬಂದ್ ಮಾಡಲಾಗಿದೆ. ನೀರಿನ ಕೊರತೆಯಿಂದ ನಿರ್ಮಲ ಪಬ್ಲಿಕ್ ಟಾಯ್ಲೆಟ್ಗೂ ಬೀಗ ಹಾಕಲಾಗಿದೆ. ಇತ್ತ ಜನರಿಗೆ ನಿತ್ಯ ಕರ್ಮಗಳಿಗೂ ನೀರಿನ ಕಷ್ಟ ಆಗುತ್ತಿದೆ. ಕೂಡಲೇ ಶೌಚಾಲಯಗಳಿಗೆ ನೀರು ಸರಬರಾಜು ಮಾಡಿ ಗಾರ್ಡನ್ ಸಿಟಿ ಬೆಂಗಳೂರನ್ನು ಉಳಿಸಿ ಎಂದು ಸರ್ಕಾರಕ್ಕೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಅಂತಹ ಪ್ರದೇಶಗಳಲ್ಲಿನ ಇ-ಶೌಚಾಲಯಗಳ ನಿರ್ವಹಣೆಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ಟಾಯ್ಲೆಟ್ ಅನ್ನು ಅಧಿಕೃತವಾಗಿ ಮುಚ್ಚಿಲ್ಲ. -ಪ್ರವೀಣ್ ಲಿಂಗಯ್ಯ, ಬಿಬಿಎಂಪಿ ಮುಖ್ಯ ಇಂಜಿನಿಯರ್
ನಗರದಲ್ಲಿ ನೀರಿಲ್ಲದೆ ಜನರು ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಶೌಚಾಲಯಗಳು, ಇನ್ನಿತರ ಸ್ಥಳಗಳಲ್ಲಿ ಜನಸಾಮನ್ಯರು ಶೌಚಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಪಾಲಿಕೆಯಿಂದ ಎಲ್ಲಡೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೂ, ಅಷ್ಟು ಸಾಕಾಗುತ್ತಿಲ್ಲ. ಮಳೆ ಒಂದೇ ಇದಕ್ಕೆ ಪರಿಹಾರ. ಒಳ್ಳೆಯ ಮಳೆಯಾದರೆ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. -ಕೆ ಸತೀಶ್, ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ
ಬೆಂಗಳೂರಿನಲ್ಲಿ ಸಾಕಷ್ಟು ನೀರಿನ ಸಮಸ್ಯೆ ಉಂಟಾಗಿದೆ. ನಮ್ಮ ಸುಲಭ ಶೌಚಾಲಯಕ್ಕೆ ಟ್ಯಾಂಕರ್ಗಳ ಮೂಲಕ ನೀರನ್ನು ಹಾಕಿಸಿ ಹಾಗೋ ಹೀಗೋ ನಿರ್ವಹಣೆ ನೆಡೆಸುತ್ತಿದ್ದೇವೆ. ಬರುವ ಸಾರ್ವಜನಿಕರಿಗೆ ಕೂಡ ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಸಹಾಯ ಮಾಡುತ್ತಿದ್ದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ನಮ್ಮ ಆರ್ಥಿಕತೆಗೂ ಸಾಕಷ್ಟು ಹೊಡೆತ ಬಿದ್ದಿದೆ. ಇನ್ನೊಂದೆರಡು ತಿಂಗಳಲ್ಲಿ ಮಳೆಯಾಗಿ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಆಶಿಸುತ್ತಿದ್ದೇವೆ. -ನವೀನ್ ಕುಮಾರ್ ಚೌಧರಿ, ಸಾರ್ವಜನಿಕ ಶೌಚಾಲಯ ನಿರ್ವಾಹಕ - ವಸಂತನಗರ ವಾರ್ಡ್
ಇದನ್ನೂ ಓದಿ: ಅಗತ್ಯವಿದ್ದರೆ ಸುಮಲತಾರನ್ನು ಭೇಟಿ ಮಾಡುತ್ತೇನೆ: ಹೆಚ್. ಡಿ.ಕುಮಾರಸ್ವಾಮಿ - hdk statement