ಬೆಂಗಳೂರು: ಬಿಟ್‌ಕಾಯಿನ್ ಹಗರಣ ಪ್ರಕರಣದ ತನಿಖಾ ಕಾಲದಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಶ್ರೀಧರ್ ಪೂಜಾರ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಮರುತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಶ್ರೀಧರ್ ಪೂಜಾರ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಟ್‌ಕಾಯಿನ್ ಹಗರಣದಲ್ಲಿ ಈ ಹಿಂದೆ ಬಂಧಿಸಲ್ಪಟ್ಟ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಡಿವೈಎಸ್ಪಿ ಶ್ರೀಧರ್ ಪೂಜಾರ್ ವಿಚಾರಣೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪ ಶ್ರೀಧರ್ ಪೂಜಾರ್ ವಿರುದ್ಧ ಕೇಳಿ ಬಂದಿತ್ತು. ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದ ಬಳಿಕ ಕಾಟನ್ಪೇಟೆ ಠಾಣೆಯಲ್ಲಿ ಶ್ರೀಧರ್ ಪೂಜಾರ್ ವಿರುದ್ಧವೇ ಹೊಸ ಎಫ್ಐಆರ್ ದಾಖಲಾಗಿತ್ತು. ಆ ಹೊಸ ಪ್ರಕರಣದ ತನಿಖೆಯನ್ನೂ ಸಹ ಸದ್ಯ ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ.
ಸಿಐಡಿ ವಿಚಾರಣೆಗೆ ಹಾಜರಾಗದ ಶ್ರೀಧರ್ ಪೂಜಾರ್ ಅವರನ್ನು ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿ ಮಾಡಿತ್ತು. ವಾರೆಂಟ್ ಪ್ರಶ್ನಿಸಿ ಶ್ರೀಧರ್ ಪೂಜಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಳಿಕ ಘೋಷಿತ ಆರೋಪಿ ಎಂಬ ಆದೇಶವನ್ನು ರದ್ದುಪಡಿಸಿತ್ತು.
ಇದನ್ನೂ ಓದಿ: 20 ವರ್ಷಗಳಿಂದ ಗುತ್ತಿಗೆ ಸೇವೆ: ಕಾಯಂಗೊಳಿಸಲು ಹೈಕೋರ್ಟ್ ಆದೇಶ