ಧಾರವಾಡ: ''ಮೇ 14ರಿಂದ 23 ರ ವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕು ವ್ಯಾಪ್ತಿಯ 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗುವುದು'' ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ''ಬರಗಾಲದ ನಡುವೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ 10 ದಿನಗಳ ಕಾಲ ನಿರಂತರ ಮಲಪ್ರಭಾ ಬಲದಂಡೆ ಕಾಲುವೆಗಳಿಂದ 0.5 ಟಿಎಂಸಿ (600 ಕ್ಯೂಸೆಕ್) ನೀರನ್ನು ನಾಲ್ಕು ತಾಲೂಕುಗಳ 58 ಕೆರೆಗಳಿಗೆ ಬಿಡಲಾಗುವುದು. ನವಲಗುಂದ ತಾಲೂಕಿನ 37 ಕೆರೆ, ಅಣ್ಣಿಗೇರಿಯ 13, ಹುಬ್ಬಳ್ಳಿಯ 7 ಹಾಗೂ ಕುಂದಗೋಳದ 3 ಪೂರಕ ಸಂಗ್ರಹಣಾ ಕೆರೆಗಳನ್ನು ಭರ್ತಿ ಮಾಡಲಾಗುವುದು. ಆಯಾ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ನೀರಾವರಿ ಇಲಾಖೆ ಎಇಇಗಳು ಕ್ರಿಯಾಶೀಲರಾಗಿ ನಿಗಾವಹಿಸಬೇಕು'' ಎಂದು ಸೂಚನೆ ನೀಡಿದ್ದಾರೆ.
''ಕಾಲುವೆಗೆ ಹರಿಸಲಾದ ನೀರು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆಯಾಗತಕ್ಕದ್ದು ಕುಡಿಯುವ ನೀರು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕಾಗಿ ಬಳಕೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾ ವಹಿಸತಕ್ಕದ್ದು'' ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ''ನೀರಾವರಿ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಪೊಲೀಸ್ ಹಾಗೂ ಗ್ರಾಮೀಣ ಕುಡಿಯುವ ನೀರು ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂರು ತಂಡಗಳನ್ನು ಮೂರು ಶಿಫ್ಟ್ಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಎಲ್ಲರೂ ಒಬ್ಬರಿಗೊಬ್ಬರು ಸಹಕಾರದೊಂದಿಗೆ ನಾಲ್ಕು ತಾಲೂಕುಗಳ 7 ಉಪ ವಿಭಾಗಗಳ ಸುಮಾರು 90 ಕಿ.ಮೀ ವ್ಯಾಪ್ತಿಯ ಕಾಲುವೆ ಸುತ್ತ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು'' ಎಂದು ತಿಳಿಸಿದರು.
''ಕಾಲುವೆ ಸುತ್ತಲಿನ 66 ಗ್ರಾಮಗಳಲ್ಲಿ 144 ಸೆಕ್ಷನ್ ಆದೇಶ ಹೊರಡಿಸಲಾಗುವುದು. ನೀರು ಹರಿಸುವ ಸಮಯದಲ್ಲಿ ಆಯಾ ವಿಭಾಗಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು'' ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ತಿಳಿಸಿದರು.
''ಬರಗಾಲ ಸ್ಥಿತಿಯಾಗಿರುವುದರಿಂದ 58 ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಲಾಗುವುದು. ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ನೀರು ಬಳಕೆಯಾಗದಂತೆ ಆಯಾ ವ್ಯಾಪ್ತಿಯ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು, ಪಿಡಿಒ, ಗ್ರಾಮಲೆಕ್ಕಿಗರು, ಪೊಲೀಸ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ನೀರು ಹರಿಸುವ ಸಮಯದಲ್ಲಿ ಎಲ್ಲ ಐಪಿಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸತಕ್ಕದ್ದು, ಸೆಕ್ಷನ್ ಅಧಿಕಾರಿಗಳನ್ನು ಇದಕ್ಕೆ ನೇಮಿಸಲಾಗುವುದು'' ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಕುಮಾರ ತಿಳಿಸಿದರು.
ಇದನ್ನೂ ಓದಿ: ಬಿಸಿಲನಾಡು ಕಲಬುರಗಿಯಲ್ಲಿ ಮಳೆ ಅಬ್ಬರ; ಸಿಡಿಲಿಗೆ ಮಹಿಳೆ ಬಲಿ - RAIN IN KALABURAGI