ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಶರದ್ ಬಾಹು ಸಾಹೇಬ್ ಕಲಾಸ್ಕರ್ ಎಂಬುವರಿಗೆ ಇಂದು ಜಾಮೀನು ಮಂಜೂರಾಗಿದೆ. ಈ ಮೂಲಕ ಗೌರಿ ಲಂಕೇಶ್ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಂತಾಗಿದೆ.
ಆರೋಪಿ ಕಲಾಸ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮುರುಳೀಧರ್ ಪೈ ಜಾಮೀನು ಮಂಜೂರು ಮಾಡಿದ್ದಾರೆ.
ಅಲ್ಲದೇ, ಗೌರಿಲಂಕೇಶ್ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರಾಗಿದ್ದು, ಅರ್ಜಿದಾರ ಕಲಾಸ್ಕರ್ ಅವರಿಗೆ ಸಮಾನತೆ ಆಧಾರದಲ್ಲಿ ಜಾಮೀನು ಮಂಜೂ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸಂವಿಧಾನದ 21ರ ಅಡಿ ಬದುಕುವುದು ಮೂಲಭೂತ ಹಕ್ಕು ಎಂಬುದಾಗಿ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಆರೋಪಿಗಳ ವಿರುದ್ಧ ವಿಚಾರಣೆ ಬಾಕಿಯಿರುವ ಸಂದರ್ಭದಲ್ಲಿ ಅವರ ವೈಯಕ್ತಿಕ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ. ಅನಗತ್ಯ ವಿಳಂಬವು ಬದುಕುವ ಹಕ್ಕನ್ನು ಮೊಟಕುಗೊಳಿಸಿದಂತಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಅರ್ಜಿದಾರರು 2018ರ ಸೆಪ್ಟೆಂಬರ್ 4ರಿಂದ ಬಂಧನದಲ್ಲಿದ್ದು, ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಜಾಮೀನು ನೀಡದಂತೆ ಮನವಿ ಮಾಡಿದ ಪ್ರಾಸಿಕ್ಯೂಷನ್ ಪರ ವಕೀಲರು: ವಿಚಾರಣೆ ವೇಳೆ ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ಮತ್ತೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಾರೆ ಎಂಬುದಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಆತಂಕ ವ್ಯಕ್ತಪಡಿಸಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು. ಆದರೆ, ಪ್ರಕರಣದ ಸಾಕ್ಷಿಗಳ ಹೆಸರುಗಳನ್ನು ಆರೋಪಿಗಳಿಗೆ ತಿಳಿಯದಂತೆ ಮರೆ ಮಾಚಲಾಗಿದೆ. ಅಂತಹ ಸಾಕ್ಷಿಗಳನ್ನು ನಾಶ ಮಾಡುವ ಆತಂಕ ಇರುವುದಿಲ್ಲ. ಅಲ್ಲದೇ, ಈಗಾಗಲೇ 164 ಸಾಕ್ಷಿಗಳನ್ನು ಪರಿಶೀಲಿಸಿದೆ. ಇನ್ನುಳಿದ ಸಾಕ್ಷಿಗಳಲ್ಲಿ ಹೆಚ್ಚಿನದಾಗಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಆತಂಕ ಪರಿಗಣಿಸಲಾಗದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, 2 ಲಕ್ಷ ರೂ.ಗಳ ಬಾಂಡ್ ಮತ್ತು ಎರಡು ಶ್ಯೂರಿಟಿಗಳನ್ನು ನೀಡಬೇಕು ಎಂದು ತಿಳಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಅರ್ಜಿದಾರರ ವಿರುದ್ಧ ಸಂಘಟಿತ ಅಪರಾಧಗಳ ಗುಂಪಿನ ಸದಸ್ಯ, ಪಿಸ್ತೂಲ್, ಏರ್ ಗನ್ ಬಳಕೆಯ ಕುರಿತಂತೆ ತರಬೇತಿ, ಕರಾಟೆ ಅಭ್ಯಾಸ ಮಾಡಿಸಿ ಇತರ ಆರೋಪಿಗಳಿಗೆ ತರಬೇತಿ ನೀಡಿದ್ದಾರೆ ಎಂಬುದಾಗಿತ್ತು.
ಆರೋಪಿಗಳ ವಿರುದ್ಧ ಐಪಿಸಿ 302(ಕೊಲೆ), 120ಬಿ(ಕ್ರಿಮಿನಲ್ ಪಿತೂರಿಗೆ ಶಿಕ್ಷೆ), 118(ಜೀವಾವಧಿ ಶಿಕ್ಷೆಯಾಗುವಂತಹ ಕೃತ್ಯಕ್ಕೆ ಸಹಕಾರ), 304 (ಕೊಲೆ ಆರೋಪಕ್ಕೆ ಶಿಕ್ಷೆ), ಭಾರತೀಯ ಶಸ್ತ್ರಾಸ್ತ್ರ ಕಾಯಿದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣಾ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ಆರೋಪಿಗಳು ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಆದೇಶಿಸಿತ್ತು.
ಇತರ ಆರೋಪಿಗಳಿಗೂ ಜಾಮೀನು: ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಮೂಲ್ ಕಾಳೆ, ರಾಜೇಶ್ ಡಿ ಬಂಗೇರಾ, ವಾಸುದೇವ್ ಸೂರ್ಯವಂಶಿ, ರುಷಿಕೇಶ್ ದೇವ್ಡೇಕರ್, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬುಡ್ಡಿ ಮತ್ತು ಮನೋಹರ್ ದುಂಡೀಪ ಯಡವೆ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಅಲ್ಲದೆ, ಆರೋಪಿಗಳಾದ ಭರತ್ ಕುರಾನೆ, ಶ್ರೀಕಾಂತ್ ಪಂಗರ್ಕರ್, ಸುಜಿತ್ ಕುಮಾರ್ ಮತ್ತು ಸುಧನ್ವ ಅವರಿಗೆ ಸೆಪ್ಟೆಂಬರ್ 4ರಂದು, 11ನೇ ಆರೋಪಿ ಎನ್ ಮೋಹನ್ ನಾಯಕ್ ಅಲಿಯಾಸ್ ಸಂಪಜೆ ಎಂಬುವರಿಗೆ 2023ರ ಡಿಸೆಂಬರ್ 7ರಂದು, ಅಮಿತ್ ದಿಗ್ವೇಕರ್, ಕೆ.ಟಿ.ನವೀನ್ ಕುಮಾರ್ ಮತ್ತು ಸುರೇಶ್ ಹೆಚ್.ಎಲ್ ಅವರಿಗೆ ಜುಲೈ 16ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು.
ಒಬ್ಬ ಆರೋಪಿ ಪರಾರಿ: ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳಿದ್ದು, 15ನೇ ಆರೋಪಿ ವಿಕಾಸ್ ಪಟೇಲ್ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್ ಎಂಬುವರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: 4 ವರ್ಷದ ಬಾಲಕನ ಮೇಲೆರೆಗಿದ ರಾಟ್ವೈಲರ್ ಸಾಕುನಾಯಿ; ರಕ್ಷಿಸಲು ಹೋದ ತಂದೆಗೂ ಗಾಯ
ಇದನ್ನೂ ಓದಿ: ಪದವಿ ಪ್ರಮಾಣಪತ್ರವಿದ್ದರೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ಗೆ ಪಿಯುಸಿ ಪ್ರಮಾಣಪತ್ರ ಅಗತ್ಯವಿಲ್ಲ: ಹೈಕೋರ್ಟ್