ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರು ಸಲಹೆ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ, ಟಾರ್ಗೆಟ್ ಹಾಗೂ ಕಾಲಮಿತಿ ನಿಗದಿ ಮಾಡದಿದ್ದರೆ, ಇದು ಮತ್ತೊಂದು ಕಾಟಾಚಾರದ ಸಭೆಯಾಗಲಿದೆ ಎಂದಿದ್ದಾರೆ.
ಬೆಂಗಳೂರಿನ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನ ಸಂಬಂಧಪಟ್ಟವರ ಸಭೆ ಕರೆದಿದ್ದಾರೆ. ಬರಗಾಲವಿದೆ ಅಂತ ಗೊತ್ತಿದ್ದರೂ ಕಳೆದ ಆರೇಳು ತಿಂಗಳಿಂದ ಯಾವುದೇ ಮುಂಜಾಗ್ರತೆ ವಹಿಸದೆ, ಪೂರ್ವಸಿದ್ಧತೆ ಮಾಡಿಕೊಳ್ಳದೆ, ಪರ್ಯಾಯ ಮಾರ್ಗಗಳನ್ನು ಹುಡುಕದೆ ಕಾಲಹರಣ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯೇ ಇಂದಿನ ಸಮಸ್ಯೆಗೆ ಕಾರಣ ಎಂದು ಪತ್ರಿಕಾ ಹೇಳಿಕೆ ಮೂಲಕ ಅಶೋಕ್ ದೂರಿದ್ದಾರೆ.
ಆರ್. ಅಶೋಕ್ ನೀಡಿದ ಸಲಹೆಗಳು:
- ಟ್ಯಾಂಕರ್ಗಳ ನೋಂದಣಿಗೆ ನೀಡಲಾಗಿದ್ದು, ಗಡುವು ಮುಕ್ತಾಯವಾಗಿ ಎರಡು ದಿನಗಳು ಕಳೆದಿದ್ದರೂ, ಇನ್ನೂ ಟ್ಯಾಂಕರ್ಗಳ ನೋಂದಣಿ ಪೂರ್ತಿಯಾಗಿಲ್ಲ. ಬೆಂಗಳೂರಲ್ಲಿ 3,500ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್ಗಳಿವೆ. ಆದರೆ, ನೋಂದಣಿ ಆಗಿರುವುದು ಕೇವಲ 1,700 ಮಾತ್ರ. ಅಂದರೆ ಶೇಕಾಡ 50ಕ್ಕೂ ಹೆಚ್ಚು ಟ್ಯಾಂಕರ್ಗಳು ಇನ್ನೂ ನೋಂದಣಿ ಆಗಿಲ್ಲ. ಟ್ಯಾಂಕರ್ ಮಾಫಿಯಾ, ಸುಲಿಗೆಗೆ ಕಡಿವಾಣ ಹಾಕಬೇಕಾದರೆ ಕಡ್ಡಾಯವಾಗಿ ಯಾವುದೇ ಮುಲಾಜಿಲ್ಲದೆ ಎಲ್ಲಾ ಟ್ಯಾಂಕರ್ಗಳ ನೋಂದಣಿ ಮಾಡಿಸಬೇಕು.
- ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುವ ಟ್ಯಾಂಕರ್ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ ಎಂಬ ನಿಯಮ ಇದ್ದರೂ ಇನ್ನೂ ಹಲವಾರು ಕಡೆ ಸ್ಟಿಕ್ಕರ್ ಅಂಟಿಸಿಲ್ಲ. ಸ್ಟಿಕ್ಕರ್ ಇಲ್ಲದಿದ್ದರೆ ನೀರಿನ ದುರ್ಬಳಕೆ ಆಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಡ್ಡಾಯವಾಗಿ ಸ್ಟಿಕ್ಕರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು.
- ನೋಂದಣಿಗೊಂಡಿರುವ ಖಾಸಗಿ ಟ್ಯಾಂಕರ್ಗಳಿಗೆ ವಿಶೇಷ ಸಂಖ್ಯೆ ನೀಡಿ, ಗುರುತಿನ ಚೀಟಿ ಅಂಟಿಸಬೇಕು. ಜಿಲ್ಲಾಡಳಿತ ನೀಡಿರುವ ದರ ಪಟ್ಟಿ ಹಾಗೂ ದೂರು ಸಂಖ್ಯೆಯನ್ನು ಟ್ಯಾಂಕರ್ಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು.
- ಅಕ್ರಮ ತಡೆಯಲು ಟ್ಯಾಂಕರ್ಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸಬೇಕು. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು.
- ಸಾರ್ವಜನಿಕರಿಗೆ ನೀಡಿರುವ ಜಲಮಂಡಳಿ/ ಬಿಬಿಎಂಪಿ ಸಹಾಯವಾಣಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಖಾಸಗಿ ಕಾಲ್ ಸೆಂಟರ್ ತೆರೆಯುವ ಮೂಲಕ ಜಲಮಂಡಳಿ ಸಹಾಯವಾಣಿಯನ್ನು ಜನಸ್ನೇಹಿ ಮಾಡಲು ಕ್ರಮ ಕೈಗೊಳ್ಳಬೇಕು.
- ಕೇವಲ ಬೆಂಗಳೂರಿನ ಹೃದಯ ಭಾಗ ಮತ್ತು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವಲ್ಲದೆ ಬಿಬಿಎಂಪಿ ಹೊರವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಕೂಡ ವಿಶೇಷ ಗಮನ ಹರಿಸಬೇಕು.
ಸರ್ಕಾರ ಸಮರೋಪಾದಿಯಲ್ಲಿ ಈ ಮೇಲಿನ ಕ್ರಮಗಳನ್ನು ಜಾರಿ ಮಾಡಿದರೆ ಮಾತ್ರ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ, ಟಾರ್ಗೆಟ್ ಹಾಗೂ ಕಾಲಮಿತಿ ನಿಗದಿ ಮಾಡಲು ಸಾಧ್ಯ. ಇಲ್ಲವಾದರೆ ಇದು ಮತ್ತೊಂದು ಕಾಟಾಚಾರದ ಸಭೆ ಆಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಮೋದಿ ಕೊಡುಗೆಯೇನು ಎನ್ನುವ ಸಿದ್ದರಾಮಯ್ಯಗೆ ಜನತೆಯೇ ಉತ್ತರ ನೀಡುತ್ತಾರೆ: ವಿಜಯೇಂದ್ರ