ಕಾರವಾರ: ರಾಜ್ಯದಲ್ಲಿ ಅತೀ ಹೆಚ್ಚು ಪೋಕ್ಸೋ ಪ್ರಕರಣಗಳು 18 ವರ್ಷದೊಳಗಿನ ವಯೋಮಿತಿಯಲ್ಲಿ ಕಂಡು ಬರುತ್ತಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"18 ವರ್ಷದೊಳಗಿನವರೂ ಕೂಡಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 44 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಿಲುಕುತ್ತಿದ್ದಾರೆ. ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಆದ್ದರಿಂದ ಎಲ್ಲಾ ಪದವಿ ಪೂರ್ವ ಕಾಲೇಜುಗಳು, ಐ.ಟಿ.ಐ. ಡಿಪ್ಲೋಮೋ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪೋಕ್ಸೋ ಕುರಿತಂತೆ ಹೆಚ್ಚಿನ ಅರಿವು ಮೂಡಿಸಬೇಕು".
"ಈ ಕಾಲೇಜುಗಳ ಪ್ರಾಂಶುಪಾಲರಿಗೆ ಮಕ್ಕಳ ರಕ್ಷಣಾ ನೀತಿ ಮತ್ತು ಪೊಕ್ಸೋ ಕಾಯ್ದೆ ಬಗ್ಗೆ ತರಬೇತಿ ಆಯೋಜಿಸಿ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳ ಕುರಿತಂತೆ ತಿಳಿಸಬೇಕು ಎಂದರು. ಹದಿಹರೆಯದ ವಿದ್ಯಾರ್ಥಿಗಳು ಪೋಕ್ಸೋ ಪ್ರಕರಣಗಳಲ್ಲಿ ಸಿಲುಕಲು ಶೇ. 70ರಷ್ಟು ಸೋಷಿಯಲ್ ಮೀಡಿಯಾಗಳ ಬಳಕೆ ಕಾರಣವಾಗಿದ್ದು, ವಿದ್ಯಾರ್ಥಿಗಳಿಗೆ ಸುರಕ್ಷಿತ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುವ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಜಾಗೃತಿ ಮೂಡಿಸಬೇಕಿದೆ" ಎಂದರು.
"ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿ ಬಗ್ಗೆ ತರಬೇತಿ ಆಯೋಜಿಸಿ. ಶಿಕ್ಷಕರಿಗೆ ಮಾಹಿತಿ ನೀಡಬೇಕು. ಮಕ್ಕಳ ರಕ್ಷಣಾ ನೀತಿ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಮಕ್ಕಳ ಹಕ್ಕುಗಳ ಕ್ಲಬ್ ರಚಿಸಬೇಕು. ವಿವಿಧ ಇಲಾಖೆಗಳಲ್ಲಿ ಮಕ್ಕಳಿಗಾಗಿ ರೂಪಿಸಿರುವ ಯೋಜನೆಗಳು ಮತ್ತು ಅನುದಾನದ ಸಂಪೂರ್ಣ ಸದ್ಬಳಕೆ ಆಗಬೇಕು" ಎಂದರು.
ಮುಂದುವರೆದು "ಖಾಸಗಿ ಶಾಲಾ ಬಸ್ಗಳು ಪಿಟ್ನೆಸ್ ಹೊಂದಿರುವ ಬಗ್ಗೆ ಆಗಾಗ್ಗೆ ಪರಿಶೀಲಿಸುತ್ತಿರಬೇಕು, ವಾಹನದ ಡ್ರೆವರ್ ಮತ್ತು ಕಂಡಕ್ಟರ್ಗಳ ಹಿನ್ನೆಲೆ ಬಗ್ಗೆ ಪರಿಶೀಲನೆ ಮಾಡಿಸಿರಬೇಕು. ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪೊಲೀಸ್ ಇಲಾಖೆ ಮಕ್ಕಳ ಸ್ನೇಹಿ ಎಂಬುದನ್ನು ನಿರೂಪಿಸಿ, ಮಕ್ಕಳು ಧೈರ್ಯವಾಗಿ ಠಾಣೆಗೆ ಬರುವಂತಾಗಬೇಕು" ಎಂದರು.
"ಆರೋಗ್ಯ ಇಲಾಖೆಯ ಮೂಲಕ ಎಲ್ಲಾ ಶಾಲಾ ಮಕ್ಕಳ ಆರೋಗ್ಯ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ನೀಡಬೇಕು. ಹದಿ ಹರೆಯದವರ ಗರ್ಭಧಾರಣೆಯ ಕುರಿತಂತೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಪರಿಶೀಲನೆ ನಡೆಸಿ, ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡದೇ ಇರುವ ಬಗ್ಗೆ ಎಚ್ಚರವಹಿಸಬೇಕು ಮತ್ತು ಭ್ರೂಣ ಲಿಂಗಪತ್ತೆ ನಡೆಯದಂತೆ ಕೂಡಾ ಪರಿಶೀಲಿಸಬೇಕು. ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿನ 25% ಅನುದಾನದಲ್ಲಿ 18 ವರ್ಷದೊಳಗಿನ ಮಕ್ಕಳಿಗೂ ಮೀಸಲಿಡಬೇಕು. 5% ವಿಕಲಚೇತನ ಅನುದಾನದಲ್ಲಿ ವಿಕಲಚೇತನ ಮಕ್ಕಳಿಗೆ ಸೌಲಭ್ಯಗಳನ್ನು ನೀಡಿ, 2% ಕ್ರೀಡಾ ಅನುದಾನದಲ್ಲಿ ಮಕ್ಕಳಿಗೆ ಸೌಲಭ್ಯಗಳನ್ನು ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯವನ್ನು ಆರೋಗ್ಯ ಇಲಾಖೆ ಮೂಲಕ ಪರೀಕ್ಷಿಸಿ, ಅವರ ಆರೋಗ್ಯಕ್ಕೆ ಒತ್ತು ನೀಡಿ, ಮಕ್ಕಳ ಮನೋ ವಿಕಾಸಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು".
"ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾಯುವ ಮತ್ತು ಮಕ್ಕಳಿಗೆ ಹಾಲುಣಿಸುವ ಕೊಠಡಿ ಇರಬೇಕು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಉಚಿತ ಸಹಾಯವಾಣಿ 1098 ಸಂಖ್ಯೆ ಬರೆಸಬೇಕು. ಎಲ್ಲಾ ಡ್ರೈವರ್ ಮತ್ತು ಕಂಡೆಕ್ಟರ್ಗಳಿಗೆ ಪೋಕ್ಸೋ ಬಗ್ಗೆ ಹಾಗೂ ಬಾಲ ನ್ಯಾಯ ಕಾಯ್ದೆ ಬಗ್ಗೆ ತರಬೇತಿ ಆಯೋಜಿಸಬೇಕು". ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಬೇಕು" ಎಂದು ಹೇಳಿದರು.
ಬಳಿಕ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿ, "ಜಿಲ್ಲೆಯಲ್ಲಿ ಶಾಲೆಗಳು, ಅಂಗನವಾಡಿಗಳು ಮತ್ತು ಹಾಸ್ಟೆಲ್ಗಳಲ್ಲಿ ಮಕ್ಕಳ ಸಂಪೂರ್ಣ ಸುರಕ್ಷತೆಯ ಕುರಿತಂತೆ ಆಡಿಟ್ ನಡೆಸಲಾಗುವುದು ಮತ್ತು ಪೊಲೀಸ್ ಇಲಾಖೆಯ ಮೂಲಕ ಮಕ್ಕಳಿಗೆ ಸುರಕ್ಷತೆಯ ಕುರಿತಂತೆ ಜಾಗೃತಿ ಮೂಡಿಸಲಾಗುವುದು" ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಯುವಕನಿಂದ 65ರ ವೃದ್ಧೆ ಮೇಲೆ ಅತ್ಯಾಚಾರ! - RAPE ON OLD WOMAN