ಬೆಳಗಾವಿ: "ದೇಶ ಕಂಡ ಮುತ್ಸದ್ಧಿ ಪ್ರಧಾನಿ, ಶ್ರೇಷ್ಠ ಆರ್ಥಿಕ ತಜ್ಞ, ಉದಾರೀಕರಣದ ಹರಿಕಾರರಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆ ದೇಶವಷ್ಟೇ ಅಲ್ಲದೇ ಜಗತ್ತಿಗೆ ದೊಡ್ಡ ನಷ್ಟ" ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತೀವ್ರ ಸಂತಾಪ ಸೂಚಿಸಿದರು.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಡಾ.ಕೋರೆ, "ನಾನು 1990ರಲ್ಲಿ ಮೊದಲ ಬಾರಿ ರಾಜ್ಯಸಭಾ ಸದಸ್ಯನಾಗಿದ್ದೆ. ಆಗ 1991ರಲ್ಲಿ ದೇಶದಲ್ಲಿ ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿಯಾದರು. ಈ ವೇಳೆ ನರಸಿಂಹರಾವ್, ವಿಶ್ವ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ರಾಜೀನಾಮೆ ಕೊಡಿಸಿ ಕರೆದುಕೊಂಡು ಬಂದು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು. ಕೇಂದ್ರದ ಹಣಕಾಸು ಸಚಿವರನ್ನಾಗಿ ಮಾಡಿದರು. ಮುಂದೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರು. ಈ ವ್ಯಕ್ತಿ ಮಾತು ಕಡಿಮೆ, ಕೃತಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಸೌಮ್ಯ ಸ್ವಭಾವ ಅವರದ್ದಾಗಿತ್ತು" ಎಂದು ನೆನಪಿಸಿಕೊಂಡರು.
"ಇಬ್ಬರೂ ರಾಜ್ಯಸಭಾ ಸದಸ್ಯರಾಗಿದ್ದರಿಂದ ನಾನು ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ. ಒಮ್ಮೆ ಇಚಲಕರಂಜಿಯಲ್ಲಿ ಸ್ಪಿನ್ನಿಂಗ್ ಮಿಲ್ ಉದ್ಘಾಟನೆಗೆ ಅವರನ್ನು ಕರೆದುಕೊಂಡು ಬಂದಿದ್ದೆ. ಆಗ ಕೆಎಲ್ಇ ಆಸ್ಪತ್ರೆ ಕಟ್ಟಡ ಕೆಲಸ ನಡೆಯುತ್ತಿತ್ತು. ಇದನ್ನು ನೋಡಿ ಅವರು ತುಂಬಾ ಖುಷಿಪಟ್ಟಿದ್ದರು. ನಮ್ಮ ದೇಶದಲ್ಲಿ ಇನ್ನೂ ಹೆಚ್ಚು ಮೆಡಿಕಲ್ ಕಾಲೇಜುಗಳ ಅಗತ್ಯತೆಯಿದೆ. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆಸ್ಪತ್ರೆ ನಿರ್ಮಾಣಕ್ಕೆ ಇಂಥ ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು" ಎಂದು ಅಭಿಪ್ರಾಯಪಟ್ಟಿದ್ದರು ಎಂದು ಮೆಲುಕು ಹಾಕಿದರು.
"1991ರ ಕಾಲಘಟ್ಟದಲ್ಲಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಡಾ.ಮನಮೋಹನ್ ಸಿಂಗ್ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶಕೊಟ್ಟರು. ಸರ್ಕಾರದ ಬಳಿ ಇದ್ದ ಬಂಗಾರವನ್ನು ಒತ್ತೆ ಇಟ್ಟು ದುಡ್ಡು ತರಿಸಿಕೊಳ್ಳುವ ಪರಿಸ್ಥಿತಿಯಿತ್ತು. ಆಗ ಸಿಂಗ್ ಅವರು ಜಾರಿಗೆ ತಂದ ವಿದೇಶಿ ನೇರ ಬಂಡವಾಳ ಹೂಡಿಕೆ, ಲೈಸೆನ್ಸ್ ರಾಜ್ ತೆಗೆದುಹಾಕುವುದೂ ಸೇರಿದಂತೆ ಅನೇಕ ಆರ್ಥಿಕ ಧೋರಣೆಗಳು ದೇಶವನ್ನು ಪುನಶ್ಚೇತನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಈ ನೀತಿಗಳಿಂದಾಗಿ ಅವರನ್ನು ಅನೇಕರು ಟೀಕಿಸಿದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ಇಂದು ಭಾರತ ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು" ಎಂದು ಕೋರೆ ಹೇಳಿದರು.
"ಡಾ.ಮನಮೋಹನ್ ಸಿಂಗ್ ಅವರು ಎರಡು ಬಾರಿ ದೇಶದ ಪ್ರಧಾನಮಂತ್ರಿಯಾದರೂ ಕೂಡ ಯಾವ ವಿಷಯದ ಮೇಲೂ ಯಾರೂ ಬೊಟ್ಟು ಮಾಡುವಂತೆ ನಡೆದುಕೊಂಡವರಲ್ಲ. ರಾಜಕೀಯ ಬದ್ಧತೆಯನ್ನು ಎತ್ತಿಹಿಡಿದಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞನ ಕಳೆದುಕೊಂಡು ಭಾರತ ಬಡವಾಗಿದೆ. ಅತ್ಯಂತ ಕಡು ಬಡತನದಿಂದ ಬಂದಿದ್ದ ಅವರು, ಶಾಲೆ ಕಲಿಯಲು ತುಂಬಾ ಕಷ್ಟಪಟ್ಟಿದ್ದರು. ಆರಂಭದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ವ್ಯಕ್ತಿ ತಮ್ಮಲ್ಲಿನ ಜ್ಞಾನದಿಂದ ದೇಶದ ಪ್ರಧಾನಮಂತ್ರಿ ಆಗಿದ್ದರು. ಮುಂದುವರೆದ ದೇಶಗಳೂ ಕೂಡ ಅವರ ಸಲಹೆಗಳನ್ನು ಪಡೆಯುತ್ತಿದ್ದವು ಎಂದರೆ ಅವರ ಸಾಮರ್ಥ್ಯ ಎಂಥದ್ದು ಎಂಬುದನ್ನು ಅರಿಯಬೇಕಿದೆ" ಎಂದರು.
"ಇಡೀ ದೇಶದಲ್ಲಿ ಖಾಸಗೀಕರಣ, ಉದಾರೀಕರಣ ನೀತಿ ಜಾರಿಗೆ ತಂದ ಶ್ರೇಯಸ್ಸು ಡಾ.ಸಿಂಗ್ ಅವರಿಗೆ ಸಲ್ಲುತ್ತದೆ. ಅವರ ಸೇವೆ ಅನುಪಮ. ಅಂತಹ ಘನತೆವೆತ್ತ ಪ್ರಧಾನಿ ಇಂದಿನ ಯುವ ಜನಾಂಗಕ್ಕೆ ಹಾಗೂ ಯುವ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ನೀಡಿ, ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ" ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: ಬೆಂಗಳೂರನ್ನು ಮೆಚ್ಚಿಕೊಂಡಿದ್ದ ಮನಮೋಹನ್ ಸಿಂಗ್: ಕೊಡುಗೆ ಸ್ಮರಿಸಿದ ಡಿಸಿಎಂ ಡಿಕೆಶಿ - D K SHIVAKUMAR