ಮೈಸೂರು: ಒಳ್ಳೆಯ ಆಡಳಿತ ಕೊಡಲಿ ಎಂಬ ಉದ್ದೇಶದಿಂದ ಪಕ್ಷದ ವರಿಷ್ಠರು ಇಲಾಖೆಯ ರಿರ್ಪೊಟ್ ಕಾರ್ಡ್ ಕೇಳಿದ್ದಾರೆ. ಇದು ಪಕ್ಷದ ಆಂತರಿಕ ವಿಚಾರ. ನಾನು ಸಹ ನಮ್ಮ ಇಲಾಖೆಯ ರಿಪೊರ್ಟ್ ಕಾರ್ಡ್ ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದರೆ ಏನೂ ಹೇಳಲಿಕ್ಕೆ ಆಗಲ್ಲ, ರಾಜ್ಯ ರಾಜಕೀಯ ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದು, ಹಾಗಾಗಿ ಮೈಸೂರಿನ ಕಾಂಗ್ರೆಸ್ ಕಚೇರಿ ನಿರ್ಮಾಣವನ್ನು ಆದಷ್ಟು ಬೇಗ ಮಾಡಿ ಮುಗಿಸಿ ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಪರಮೇಶ್ವರ್, 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಬೇಗ ಬೇಗ ಕಚೇರಿ ಕೆಲಸ ಮಾಡಿ ಅಂತ ಅಷ್ಟೇ ಹೇಳಿರುವೆ. ರಾಜ್ಯ ಕಾಂಗ್ರೆಸ್ನಲ್ಲಿ ಅವಧಿ ಮುಗಿದ ಬಳಿಕ ಅಧ್ಯಕ್ಷರ ಬದಲಾವಣೆ ಆಗಬಹುದು. ಅಧ್ಯಕ್ಷರು ಬದಲಾದರೆ ಅಂತ ಈ ರೀತಿ ಹೇಳಿರುವೆ ಅಷ್ಟೇ. ಪಕ್ಷದ ವಿಚಾರವಾಗಿ ಬೇಗ ಕಟ್ಟಡ ಕಟ್ಟಿ ಅಂತ ಹೇಳಿದ್ದೇನೆ. ಆದರೆ, ಈ ಹೇಳಿಕೆಗೆ ಬೇರೆ ಅರ್ಥ ಕಲಿಸಲಾಗಿದೆ. ಅಲ್ಲದೇ ಅದನ್ನು ಪಕ್ಷದ ದೃಷ್ಟಿಯಿಂದ ಹೇಳಿದ್ದೇನೆ ಹೊರತು, ನಮ್ಮ ಸರ್ಕಾರದ ಬಗ್ಗೆ ಅಲ್ಲ. ಆ ಮಾತನ್ನು ನೀವು ತಪ್ಪಾಗಿ ಅರ್ಥೈಯಿಸಿಕೊಂಡಿರಬಹುದು' ಎಂದು ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರ ಗಟ್ಟಿಯಾಗಿದೆ, ಈ ಸರ್ಕಾರವನ್ನು ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ. ವಿಜಯೇಂದ್ರ ಏನು ಬೇಕಾದ್ರೂ ಹೇಳಲಿ. ನಮ್ಮಲ್ಲಿ 136 ಜನ ಶಾಸಕರಿದ್ದಾರೆ. ಸರ್ಕಾರ ಈ 5 ವರ್ಷದ ಜೊತೆಗೆ ಮುಂದಿನ ಬಾರಿಯು ಅಧಿಕಾರಕ್ಕೆ ಬರುತ್ತದೆ. ನಮ್ಮ ಶಾಸಕರಿಗೆ 50 ಕೋಟಿ, 100 ಕೋಟಿ ಕೊಟ್ಟಿರೂ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸದ್ಯಕ್ಕೆ ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ ಕೇಳಿದ್ದಾರೆ. ನಾನೂ ಕೂಡ ನನ್ನ ರಿಪೋರ್ಟ್ ಕಾರ್ಡ್ ನೀಡಿರುವೆ. ಯಾರನ್ನು ಉಳಿಸಿಕೊಳ್ಳಬೇಕು, ಮುಂದುವರಿಸಬೇಕು ಹೈಕಮಾಂಡ್ ತೀರ್ಮಾನಿಸಲಿದೆ. ಗುಲಾಂ ನಬಿ ಅಜಾದ್ ಇದ್ದಾಗ ಕೂಡ ವರದಿ ನೀಡುತ್ತಿದ್ದೆವು. ಅದೇ ರೀತಿ ವರದಿ ಕೇಳಿದ್ದಾರಷ್ಟೆ ಎಂದರು. ಇದೇ ವೇಳೆ, ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮ ವಿಚಾರ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಅಧ್ಯಕ್ಷರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಅದು ಅವರ ಅಧಿಕಾರ ಎಂದರು.
ರಾಜ್ಯದ ಮೂರು ಉಪಚುನಾವಣೆಗಳಲ್ಲೂ ನಾವೇ ಗೆಲುತ್ತೇವೆ. ನಿಮಗೆ ಅಚ್ಚರಿ ಆಗುವ ಫಲಿತಾಂಶ ಬರುತ್ತದೆ ಎಂದ ಅವರು, ಮಹಾರಾಷ್ಟ್ರದಲ್ಲೂ ಇಂಡಿಯಾ ಮೈತ್ರಿಕೂಟ ಅಧಿಕಾರ ಬರುತ್ತದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ : ಗೃಹ ಸಚಿವ ಡಾ ಜಿ ಪರಮೇಶ್ವರ್