ಬೆಂಗಳೂರು: ಇದು ನಿಮ್ಮ ಪಕ್ಷ, ಇಲ್ಲಿ ಪ್ರತಿಪಕ್ಷದಲ್ಲಿದ್ದೀರಿ ಎಂಬ ಚಿಂತೆ ಬೇಡ. ಇದೆಲ್ಲಾ ಬರುತ್ತೆ ಹೋಗುತ್ತೆ. ಹಗಲು ಕಳೆದು ರಾತ್ರಿ ಬರಲಿದೆ. ರಾತ್ರಿ ಕಳೆದು ಬೆಳಗಾಗಲಿದೆ. ಇದು ಚಕ್ರದಂತೆಯೇ ಉರುಳುತ್ತಲೇ ಇರುತ್ತದೆ. ಗುರಿ ಮುಟ್ಟುವವರೆಗೂ ವಿಶ್ರಮಿಸದಿರಿ. ಭಾರತ ವಿಶ್ವಗುರುವಾಗಬೇಕು. ಅದಕ್ಕಾಗಿ ಸಂಘಟಿತರಾಗಿ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಜೈಲ್ನಲ್ಲಿ ವಾಜಪೇಯಿ, ಆಡ್ವಾನಿ, ಜಾರ್ಜ್ ಫರ್ನಾಂಡಿಸ್‌ರಂಥವರು ಇದ್ದರು. ಬಿಜೆಪಿ ಕಾರ್ಯಕರ್ತರು (ಅಂದು ಭಾರತೀಯ ಜನಸಂಘ) ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿದ್ದಾರೆ. 50 ವರ್ಷಗಳ ಹಿಂದೆ ನಡೆದ ತುರ್ತು ಪರಿಸ್ಥಿತಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿದ್ದೇವೆ. ಸಂವಿಧಾನವನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ಮುಗಿಸುವ ಕೆಲಸ ಮಾಡಿದ್ದರು. ಅದನ್ನೆಲ್ಲವನ್ನೂ ಸುಧಾರಿಸುವ ಕೆಲಸವನ್ನು ನಾವು ಮಾಡಿದ್ದೇವೆ. ವಿಪರ್ಯಾಸ ಎಂದರೆ ಬಿಜೆಪಿ ಸಂವಿಧಾನ ಬದಲಿಸಲಿದೆ ಎಂದು ಸುಳ್ಳು ಪ್ರಚಾರ ಮಾಡಿದರು. ಯಾವ ಪಕ್ಷ ಸಂವಿಧಾನವನ್ನು ಮುರಿದಿತ್ತೋ ಅದೇ ಪಕ್ಷ ಬಿಜೆಪಿ ಮೇಲೆ ಇಂತಹ ಸುಳ್ಳು ಆರೋಪ ಮಾಡಿದೆ. ಸಂವಿಧಾನದ ಮೂಲ ತತ್ವವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಸಮಯಾನುಸಾರ ಆಯಾ ಕಾಲಘಟ್ಟಕ್ಕೆ ಅಗತ್ಯವಿರುವ ಕೆಲ ಬದಲಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಕನ್ವಿನ್ಸ್ ಮಾಡಲು ಆಗದಿದ್ದರೆ ಕನ್ಫ್ಯೂಸ್ ಮಾಡುವ ಕೆಲಸ ಮಾಡ್ತಾರೆ. ಕಾಂಗ್ರೆಸ್ ಕೂಡ ಅದನ್ನೇ ಮಾಡಿದ್ದು ಎಂದು ಟೀಕಿಸಿದರು.
1975ರಲ್ಲಿ ಎಸ್ಎಸ್ಎಲ್ಸಿ ಓದುತ್ತಲೇ ಸಂಘದಲ್ಲಿ ಕೆಲಸ ಮಾಡುತ್ತಿದ್ದೆ. ಇಂಜಿನಿಯರ್ ಮಾಡಬೇಕೆಂದು ಮನೆಯಲ್ಲಿ ಒತ್ತಡ ಇತ್ತು. ಆದರೆ, ಮಾರ್ಕ್ಸ್ ಕಡಿಮೆ ಬಂದ ಕಾರಣ ಇಂಜಿನಿಯರ್ ಸೀಟ್ ಸಿಗಲಿಲ್ಲ. ಅಂದು ತುರ್ತು ಪರಿಸ್ಥಿತಿ ವಿರುದ್ದ ಕೆಲಸ ಮಾಡಿದೆ. ಈಗ 9 ಗೌರವ ಡಾಕ್ಟರೇಟ್ ಸಿಕ್ಕಿದೆ. ಆದರೆ, ನಾನು ಡಾಕ್ಟರ್ ಅಲ್ಲ ಎಂದರು.
ಮೋದಿ ಸರ್ಕಾರ ತೆಗೆದುಕೊಂಡ ನಿರ್ಣಯಗಳ ಪರಿಣಾಮ ಎಲ್ಲ ಕ್ಷೇತ್ರದಲ್ಲೂ ಕಾಣುತ್ತಿದೆ. ಆದಾಯ ದ್ವಿಗುಣವಾಗಿದೆ. ಉದ್ಯೋಗ ಸೃಷ್ಟಿಯಾಗಿದೆ. ಆಟೊಮೊಬೈಲ್ ಇಂಡಸ್ಟ್ರಿ ಹೆಚ್ಚಿನ ಆದಾಯ ನೀಡುತ್ತಿದೆ. ಈವರೆಗೂ 7ನೇ ಸ್ಥಾನದಲ್ಲಿ ಆಟೊಮೊಬೈಲ್ ಇಂಡಸ್ಟ್ರಿ ಇತ್ತು. ಈಗ ನಾವು ಜಪಾನ್ ಮೀರಿಸಿ 3ನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ 5 ವರ್ಷದಲ್ಲಿ ಮೊದಲ ಸ್ಥಾನಕ್ಕೆ ಬರುತ್ತೇವೆ ಎಂದು ಹೇಳಿದರು.
ಮರ್ಸಿಡಿಸ್ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಇಲ್ಲಿ ಆಗುತ್ತದೆ. ಹೈಡ್ರೋಜನ್, ಎಥೆನಾಲ್ನಲ್ಲಿ ಓಡುವ ಗಾಡಿ ಇದೆ. ಈಗ ಇಡೀ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಓಡಲಿದೆ. ಡೀಸೆಲ್ ಬಸ್ಗಿಂತ 30% ಕಡಿಮೆ ಟಿಕೆಟ್ ದರದ ಎಲೆಕ್ಟ್ರಿಕ್ ಬಸ್ ಸಿದ್ದವಾಗ್ತಿದೆ. ಭಾರತದ ಸಾಫ್ಟ್ವೇರ್ ಹುಡುಗರಲ್ಲಿ ಮೆಥಮೆಟಿಕ್ ಜೀನ್ ಇದೆಯಾ ಎಂದು ಜಪಾನ್ ಪ್ರಧಾನಿ ಕೇಳ್ತಿದ್ರು. ಅಷ್ಟು ಪ್ರಭಾವಿಯಾಗಿದೆ ನಮ್ಮ ಭಾರತ ಎಂದು ತಿಳಿಸಿದರು.
21ನೇ ಶತಮಾನ ಭಾರತೀಯರ ಶತಮಾನ ಎಂದು ವಿವೇಕಾನಂದರು ಹೇಳಿದ್ದರು. ನಿರುದ್ಯೋಗ ಸಮಸ್ಯೆ ಮುಕ್ತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಮನೆ, ಆಹಾರ, ವಸತಿ, ಶಿಕ್ಷಣ ಎಲ್ಲ ನೀಡುವ ಕೆಲಸ ಆಗ್ತಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ 3.5 ರೂ. ಪೆಟ್ರೋಲ್ ಬೆಲೆ ಏರಿಸಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ನನ್ನ ಬಳಿ ಸಿಎಂ, ಡಿಸಿಎಂ ಬಂದಿದ್ದರು. ಒಂದು ತಿಂಗಳಲ್ಲಿ ಲಕ್ಷ ಕೋಟಿ ರೂ.ಕೊಡ್ತೀನಿ ಎಂದಿದ್ದೇನೆ. ಆದರೆ, ಭೂಸ್ವಾಧೀನ ಮಾಡಿ, ಪರಿಸರ ಇಲಾಖೆ ಕ್ಲಿಯರೆನ್ಸ್ ತೆಗೆದುಕೊಂಡು ಬನ್ನಿ ಎಂದಿದ್ದೇನೆ. ಗಾಳಿಯಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ಎಲ್ಲ ಪ್ರಸ್ತಾವನೆಯನ್ನೂ ನಾನು ಅನುಮೋದಿಸಿ ಕೆಲಸ ಮಾಡಿಕೊಟ್ಟಿದ್ದೇನೆ. ಒಂದಲ್ಲ ಎರಡು ಲಕ್ಷಕೋಟಿ ಬೇಕಿದ್ದರೂ ಕೊಡುತ್ತೇನೆ. ಕೃಷ್ಣ ಗೋದಾವರಿ ಪ್ರಾಜೆಕ್ಟ್ ಮುಗಿದರೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನ ನೀರಿನ ಸಮಸ್ಯೆಯೂ ಪರಿಹಾರ ಆಗಲಿದೆ ಎಂದರು.
ಇಂಡಸ್ಟ್ರಿ, ಅಗ್ರಿಕಲ್ಚರ್ ಮತ್ತು ಸರ್ವಿಸ್ ಈ ಮೂರು ವಿಭಾಗದಲ್ಲಿ ಉನ್ನತಿ ಆಗಬೇಕು. ವಿವೇಕಾನಂದರ ಕನಸು ನನಸು ಮಾಡುವುದು ಬಿಜೆಪಿ ಕರ್ತವ್ಯ. ಇಡಿ ಜಗತ್ತು ಭಾರತದತ್ತನ ನೋಡುತ್ತಿದೆ. ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಪ್ರತಿ ಕ್ಷಣ ಉಪಯೋಗಿಸಿ ದೇಶದ ಅಭಿವೃದ್ಧಿ ಮಾಡಬೇಕಿದೆ. ಬಹಳಷ್ಟು ಕೆಲಸ ಆಗಿದೆ. ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ಭಾರತ ವಿಶ್ವದ ಮೂರನೆ ಆರ್ಥಿಕ ಶಕ್ತಿ ಹಾಗೂ ವಿಶ್ವಗುರುವನ್ನಾಗಿ ಮಾಡಬೇಕಿದೆ. ಪ್ರಧಾನಿ, ಸಿಎಂ, ಸಚಿವರೆಲ್ಲ ಮಾಜಿಗಳಾಗ್ತಾರೆ. ಆದರೆ, ಕಾರ್ಯಕರ್ತರು ಮಾಜಿಗಳಾಗಲ್ಲ. ನಾನು ಯಾರಿಗೂ ಹಾರ-ತುರಾಯಿ ಹಾಕಿದವನಲ್ಲ. ನನ್ನ ಅಪ್ಪ-ಅಮ್ಮ ಜನಪ್ರತಿನಿಧಿಗಳಲ್ಲ. ಆದರೂ ಕಾರ್ಯಕರ್ತನಾಗಿ ಈ ಸ್ಥಾನ ಪಡೆದಿದ್ದೇನೆ. ವಾಜಪೇಯಿ ಅವರ ಕಾಲದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಆಗುವ ಅವಕಾಶ ಸಿಕ್ಕಿತ್ತು ಎಂದು ಹೇಳಿದರು.
ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಂದಿನ ದಿನಗಳು ಬಿಜೆಪಿ ದಿನಗಳು, ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ ಎನ್ನುವುದನ್ನು ಮತ್ತೊಮ್ಮೆ ರುಜುವಾತು ಮಾಡಬೇಕು. ಅದಕ್ಕಾಗಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ.
ಈಗಿನ ರೀತಿ ವ್ಯವಸ್ಥೆ ಇಲ್ಲದ ಕಾಲದಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್ ಸೇರಿ ಹಿರಿಯರು ಪಕ್ಷ ಕಟ್ಟಿದ್ದಾರೆ. ಕೆಂಪು ಬಸ್ಸಲ್ಲಿ ಪ್ರವಾಸ ಮಾಡುತ್ತಿದ್ದರು, ರಾತ್ರಿ ಬಸ್ ಕೆಟ್ಟರೆ ಊರು ಇಲ್ಲ, ಊಟವೂ ಇಲ್ಲದೆ ಕಾಲ ಕಳೆಯಬೇಕಾದ ಸ್ಥಿತಿ ಇತ್ತು. ಬಿಜೆಪಿಗೆ ಎರಡು ಸೀಟು ಬರಲ್ಲ ಎನ್ನುವ ಟೀಕೆ ಎದುರಿಸಬೇಕಾಗಿತ್ತು. ಆದರೆ, ಈಗ ಹಿರಿಯರೆಲ್ಲ ಸೇರಿ ಬೆಳೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಕ್ಕಿರುವುದು ದೊಡ್ಡ ಗೆಲುವು. ಆಡಳಿತ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿರುವ ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದೆ. ಇದು ದೊಡ್ಡ ಸಾಧನೆ ಎಂದು ಪ್ರಶಂಸಿಸಿದರು.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ - B Y Vijayendra