ಮಂಗಳೂರು/ಬೆಂಗಳೂರು: ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ.
ಇಂದು ಬೆಂಗಳೂರಿನ ಇಎಸ್‌ಐ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜಾಜಿನಗರದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು. ಕೋಲ್ಕತ್ತಾದಲ್ಲಿ ನಡೆದ ಘಟನೆ ಊಹೆಗೂ ನಿಲುಕದ್ದಾಗಿದೆ. ವೈದ್ಯರಿಗೆ ಅವರದೇ ಆಸ್ಪತ್ರೆಗಳಲ್ಲಿ ಸುರಕ್ಷತೆ ಇಲ್ಲದಿದ್ದರೆ, ಈ ದೇಶದಲ್ಲಿ ಸುರಕ್ಷತೆ ಖಾತ್ರಿ ಯಾರಿಗಿದೆ?. ಇದು ಈಗ ವೈದ್ಯರ ಸಮಸ್ಯೆ ಮಾತ್ರವಲ್ಲ, ದೇಶದ ಜನರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಕಾಲೇಜಿನಲ್ಲಿ ಅಂತ್ಯಗೊಳಿಸಿ ಮುಂದಿನ ಭಾಗವಾಗಿ ಫ್ರೀಡಂ ಪಾರ್ಕ್ ಕಡೆ ವಿದ್ಯಾರ್ಥಿಗಳು ನೆಡೆದರು. ಈ ಪ್ರತಿಭಟನೆಗೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿಯಿಂದ ಬೆಂಬಲ ನೀಡಲಾಗಿತ್ತು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ನೇತೃತ್ವದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು. ಶನಿವಾರ ಚಾಮರಾಜಪೇಟೆಯ ಐಎಂಎ ಸರ್ಕಲ್ ಬಳಿಯ ಸಂಘದ ಕಚೇರಿಯೆದುರು ಪ್ರತಿಭಟಿಸಿದ ವೈದ್ಯರು, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿದರು. ಜೊತೆಗೆ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಮೇಲಿನ ದಾಳಿ ತಡೆಗೆ ಸೂಕ್ತ ಕಾನೂನು ಜಾರಿಗೊಳಿಸಲು ಒತ್ತಾಯಿಸಿದರು. ಐಎಂಎ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಮಾತನಾಡಿ, ವೈದ್ಯರನ್ನು ರಕ್ಷಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗುತ್ತಿದೆ. ನಾವು ವ್ಯವಸ್ಥೆ ಮೇಲಿಟ್ಟ ನಂಬಿಕೆಗೆ ದ್ರೋಹವಾಗಿದೆ. ಈಗಿನ ಕಾನೂನುಗಳು ನಮ್ಮನ್ನು ರಕ್ಷಿಸುತ್ತಿಲ್ಲ. ಹೀಗಾಗಿ ಅಗತ್ಯ ಸುಧಾರಣೆ ತಂದು ವೈದ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪ್ರತಿಭಟನೆ: ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಯಲ್ಲಿ ವ್ಯತ್ಯಯವಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಅಗತ್ಯ ಮತ್ತು ತುರ್ತು ಸೇವೆಗಳನ್ನು ವೈದ್ಯರು ಒದಗಿಸುತ್ತಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲೂ ಒಪಿಡಿ ಸೇವೆ ಬಂದ್ ಆಗಿದ್ದು, ಅಗತ್ಯ ಮತ್ತು ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕರೆಯಂತೆ ಇಂದು ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 18ರ ಬೆಳಗ್ಗೆ 6 ಗಂಟೆವರೆಗೆ 24 ಗಂಟೆಗಳ ಹೊರರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.
ಮತ್ತೊಂದೆಡೆ, ಮಂಗಳೂರಿನಲ್ಲಿ ವೈದ್ಯರು ಮೌನ ಮೆರವಣಿಗೆ ನಡೆಸಿದರು. ಮಂಗಳೂರಿನ ಮಿಲಾಗ್ರಿಸ್ ಬಳಿಯಿರುವ ಐಎಂಎಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಯಿತು. ಈ ವೇಳೆ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು ಭಾಗಿಯಾದರು. ವೈದ್ಯರ ಪ್ರತಿಭಟನೆಗೆ ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ ಸಾಥ್ ನೀಡಿದರು.
ಶಿವಮೊಗ್ಗದಲ್ಲಿ ವೈದ್ಯರ ಪ್ರತಿಭಟನೆ: ಇದೇ ವಿಚಾರವಾಗಿ ಶಿವಮೊಗ್ಗದಲ್ಲಿ ಇಂದು ವೈದ್ಯರು, ರೆಸಿಡೆಸ್ಸಿಯಲ್ ವೈದ್ಯರು ಸೇರಿದಂತೆ ಸರ್ಸಿಂಗ್ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಹೊರಟ ಪ್ರತಿಭಟನಾಕಾರರು, ಅಶೋಕ ವೃತ್ತ, ಬಿ.ಹೆಚ್.ರಸ್ತೆ, ನೆಹರು ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತ ತಲುಪಿದರು. ಇಲ್ಲಿ ಮಾನವ ಸರಪಳಿ ನಿರ್ಮಿಸಿ, ಅತ್ಯಾಚಾರ ನಡೆಸಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಎಂಎಲ್ಸಿ ಡಾ.ಧನಂಜಯ್ ಸರ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಡಿ ಜಿಲ್ಲೆ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ, ಚಿಕಿತ್ಸೆ ಸಿಗದೇ ವಾಪಸ್: ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್ ಗಳು ಬಂದಾಗಿದ್ದು ವೈದ್ಯರು ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಕ್ರೋಶ ಹೊರಹಾಕಿದರು.
ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು, ಚೆಕ್ಅಪ್ ಗೆ ಬಂದ ರೋಗಿಗಳು ವೈದ್ಯರ ಲಭ್ಯತೆ ಇಲ್ಲದೇ ವಾಪಸ್ ಆದರು. ಹಲವರು ಗಂಟೆಗಟ್ಟಲೆ ಕಾದು ವೈದ್ಯರು ಇಲ್ಲದಿದ್ದಕ್ಕೆ ಮನೆಗೆ ತೆರಳಿದರು.
ಉತ್ತರ ಕನ್ನಡದಲ್ಲೂ ಪ್ರತಿಭಟನೆ, ಚಿಕಿತ್ಸೆ ಸಿಗದೆ ಮನೆಗೆ ವಾಪಸ್ ಆದ ರೋಗಿಗಳು: ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸರ್ಕಾರಿ ಹಾಗೂ ಖಾಸಗಿಯ ಬಹುತೇಕ ಆಸ್ಪತ್ರೆಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಯಿತು. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತಾಗಿ ಒಪಿಡಿ ಸಂಪೂರ್ಣ ಬಂದ್ ಮಾಡಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಬೀದಿಗಳಿದು ಮೆರವಣಿಗೆ, ಪ್ರತಿಭಟನೆ ನಡೆಸುವ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಹೊರ ರೋಗಿ ವಿಭಾಗ ಬಂದ್ ಮಾಡಿದ್ದರಿಂದ ಕಾರವಾರದ ಕ್ರೀಮ್ಸ್ ಆಸ್ಪತ್ರೆಗೆ ಆಗಮಿಸಿದ್ದ ನೂರಾರು ರೋಗಿಗಳು ಮನೆಗೆ ವಾಪಸ್ ಆದರು.
ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ರಾಜ್ಯದಲ್ಲೂ ಕೂಡ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಆಗಿದ್ದವು. ಬೆಳಗ್ಗೆ 6 ಪ್ರಾರಂಭವಾಗಿರುವ ಪ್ರತಿಭಟನೆ ಸಂಜೆ 6 ರವರೆಗೂ ನಡಯಿತು.
ಏನೆಲ್ಲ ಸೇವೆ ಲಭ್ಯವಿಲ್ಲ?: ಒಪಿಡಿ, ಡಯಾಲಿಸಿಸ್, ಕ್ಲಿನಿಕ್ ಸೇವೆ, ಮಕ್ಕಳ ಒಪಿಡಿ, ಡೆಂಟಲ್ ಸರ್ವಿಸ್.
ಪ್ರತಿಭಟನೆಗೆ ಯಾರೆಲ್ಲ ಬೆಂಬಲ?: ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್, ಮಕ್ಕಳ ವೈದ್ಯರ ಅಸೋಸಿಯೇಷನ್, ಅರ್ಥೋಪಿಡಿಕ್ ಅಸೋಸಿಯೇಷನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ಇದನ್ನೂ ಓದಿ: ರಾಜ್ಯಾದ್ಯಂತ ವೈದ್ಯರ ಮುಷ್ಕರ: ಹಾವೇರಿಯಲ್ಲಿ ಪ್ರತಿಭಟನೆ - Doctors strike