ಮಂಗಳೂರು: ಡಿ.ಕೆ.ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿಯಲ್ಲ. ಅವರು ಹಳ್ಳಿಯ ಸಂಸದ. ಅವರಿಗೆ ಮತದಾರರ ಭಾವನೆಗಳ ಬಗ್ಗೆ ಅರಿವಿದೆ. ನಮ್ಮಲ್ಲಿನ ಹಳೆಯ ಎಂಪಿಗಳಾದ ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ ಮತ್ತು ಈಗಿನ ಎಂಪಿಯ ವ್ಯತ್ಯಾಸಗಳ ಬಗ್ಗೆಯೂ ಮತದಾರರಿಗೆ ಗೊತ್ತಿದೆ ಎಂದು ಡಿಕೆಶಿ ತಮ್ಮ ಸಹೋದರನ ಗೆಲುವಿನ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
ಡಿ.ಕೆ.ಸುರೇಶ್ ಎದುರು ಜಯದೇವ ಆಸ್ಪತ್ರೆಯ ಮಂಜುನಾಥ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜಕಾರಣ ಮಾಡುತ್ತಿದೆ. ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಚುನಾವಣೆ ಎದುರಿಸಿದ್ದವನು. ಅನಿತಾ ಕುಮಾರಸ್ವಾಮಿಯವರ ವಿರುದ್ಧ ಕಣಕ್ಕಿಳಿದು ಡಿ.ಕೆ. ಸುರೇಶ್ ಗೆದ್ದಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ನಿಂತಾಗಲೂ ಅವರು ಗೆದ್ದಿದ್ದಾರೆ. ಪ್ರತಿ ಹಳ್ಳಿ, ರಸ್ತೆ, ಅಭಿವೃದ್ಧಿ, ಮನೆಗಳ ಅಭಿವೃದ್ಧಿಯಾಗಿದೆ. ಅವರ ವಿರುದ್ಧ ಕುಮಾರಸ್ವಾಮಿ ನಿಂತರೂ ನನಗೆ ಯಾವುದೇ ಬೇಜಾರಿಲ್ಲ. ಯಾರೇ ನಿಂತರೂ ನಾವು ಸ್ವಾಗತಿಸುತ್ತೇವೆ ಎಂದರು.
ಕರಾವಳಿಯಲ್ಲಿ ವ್ಯಾಪಾರ ವಹಿವಾಟು ಆಗಬೇಕು. ಇದೆಲ್ಲಾ ಆದರೆನೇ ಜನರಿಗೆ ಉದ್ಯೋಗ ದೊರಕಲು ಸಾಧ್ಯ. ರಾಜಕಾರಣ ಸಾಧ್ಯತೆಗಳ ಕಲೆ, ಆದ್ದರಿಂದ ಇಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಅದಕ್ಕಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಇಲ್ಲಿ ನಿರುದ್ಯೋಗ ಇದೆ. ಯುವಕರು ಉದ್ಯೋಗ ಅರಸಿ ಸೌದಿ, ಬೆಂಗಳೂರು, ಮುಂಬೈ ಕಡೆ ಹೋಗುತ್ತಿದ್ದಾರೆ. ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ರೂ ಮಕ್ಕಳು ಡ್ರಾಪ್ ಔಟ್ ಆಗ್ತಿದಾರೆ. ಇಲ್ಲಿ ಧರ್ಮ ರಾಜಕೀಯವಿದೆ. ಬಿಜೆಪಿ ಅಭಿವೃದ್ಧಿ ಮಾಡುತ್ತಿಲ್ಲ. ಅದಕ್ಕಾಗಿ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಬಿಜೆಪಿಯವರು ಇಲ್ಲಿ ಭಾವನೆ, ಧರ್ಮ ಕೆರಳಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರ ಮಾಡುತ್ತಿಲ್ಲ. ಅದಕ್ಕೆ ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಬಿಜೆಪಿಯವರು ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದಾಗ ಧ್ವನಿ ಎತ್ತಿಲ್ಲ. ಮುಸ್ಲಿಮರಿಗೆ 3 ಲಕ್ಷ 71 ಸಾವಿರ ಕೋಟಿ ಬಜೆಟ್ನಲ್ಲಿ 3000 ಕೋಟಿ ರೂ. ಕೊಟ್ಟಿದ್ದೇವೆ. ಶಾಲೆಗಳ ಅಭಿವೃದ್ಧಿಗೆ, ಇತರ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಅವರಿಗೆ 1% ಕೊಡಬಾರದಾ ಎಂದು ಡಿಸಿಎಂ ಪ್ರಶ್ನಿಸಿದರು.
ಬಿಜೆಪಿ ವಿರುದ್ಧ ಸಚಿವ ಗುಂಡೂರಾವ್ ಆಕ್ರೋಶ: ಜೆರೋಸಾ ಶಾಲೆಯಲ್ಲಿ ಶಿಕ್ಷಕಿ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರು ಭಾವನೆಗಳನ್ನು ಕೆರಳಿಸಿ, ದ್ವೇಷ ಹೆಚ್ಚಿಸಿ, ಅವರ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಒತ್ತಡದಿಂದ ಶಾಲೆಯವರು ಶಿಕ್ಷಕಿಯ ವಜಾ ಮಾಡುವ ತೀರ್ಮಾನಕ್ಕೆ ಬರಬೇಕಾಯಿತು. ಶಿಕ್ಷಣ ಇಲಾಖೆಯಿಂದ ತನಿಖೆಯಾಗಿ ಅದರಲ್ಲಿ ಲೋಪ ಕಂಡುಬಂದಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಏನಾಗಿದೆ ಎಂದು ತಿಳಿದುಕೊಳ್ಳುವುದು ಬಿಟ್ಟು ವಾತಾವರಣ ಕೆಡಿಸಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ವಾತಾವರಣ ಕಲುಷಿತವಾಗಿದ್ದು, ಇದರ ಮಧ್ಯೆ ಸತ್ಯಾಸತ್ಯತೆ ಏನು ಎಂದು ತಿಳಿಯಲು ವಿಮರ್ಶೆ ಮಾಡಿ ನೋಡಬೇಕಾಗಿದೆ. ಇವರಿಗೆ ಅದಕ್ಕೆ ಸಮಯ ಇಲ್ಲ ಎಂದು ಟೀಕಿಸಿದರು.
ಪರಶುರಾಮ ವಿಗ್ರಹದ ಬಗ್ಗೆ ವೇದವ್ಯಾಸ ಕಾಮತ್ ಹೋರಾಟ ಮಾಡುತ್ತಿಲ್ಲ. ಪರಶುರಾಮ ವಿಗ್ರಹ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದು ಹಿಂದೂ ಧರ್ಮಕ್ಕೆ ಕಳಂಕ ಆಗಿದೆ. ಅದರ ಬಗ್ಗೆ ಬಿಜೆಪಿಯವರು ಮಾತಾಡುವುದಿಲ್ಲ ಎಂದರು. ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇವರ ರಾಜಕಾರಣಕ್ಕೆ ಅನುಕೂಲ ಮಾಡಲು ಧರ್ಮಾಧಾರಿತವಾಗಿ ವಿಷಯ ಕೆದಕಿ ಇಡೀ ಜಿಲ್ಲೆಗೆ ಡ್ಯಾಮೇಜ್ ಮಾಡುತ್ತಿದ್ದಾರೆ. ಶಾಲೆ ಮಕ್ಕಳಿಂದ ಘೋಷಣೆ ಕೂಗಿಸಿ ಕೆರಳಿಸಿದ್ದು, ಇದು ಜಿಲ್ಲೆಗೆ ಕೆಟ್ಟ ಹೆಸರು ಎಂದರು.
ಓದಿ: ಜಾರ್ಖಂಡ್ ಸಚಿವರ ಬದಲಿಗೆ ಪಟ್ಟು: ಬಲಪ್ರದರ್ಶನಕ್ಕೆ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬರುವ ಸಾಧ್ಯತೆ