ಬೆಂಗಳೂರು: ಇಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬೂತ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದರು. ಶಾಸಕರು ಸರಿಯಾಗಿ ಮತ ಚಲಾವಣೆ ಮಾಡುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಈ ಮೂಲಕ ಯಾವುದೇ ಮತಗಳು ಅಸಿಂಧುವಾಗದಂತೆ ಎಚ್ಚರಿಕೆ ವಹಿಸಿದರು.
ತಮ್ಮ ಪಕ್ಷದ ಶಾಸಕರಿಗೆ ಹಂಚಿಕೆಯಾದ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯದ ಮತ ಚಲಾಯಿಸುವಲ್ಲಿ ಯಾವುದೇ ಗೊಂದಲವಾಗದಂತೆ ನೋಡಿಕೊಂಡರು. ಶಾಸಕರು ಹಾಗೂ ನಾಲ್ಕು ಪಕ್ಷೇತರ ಶಾಸಕರ ಮತದಾನ ಪ್ರಕ್ರಿಯೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಗೊಂದಲ ಏರ್ಪಡದಂತೆ ಮುನ್ನೆಚ್ಚರಿಕೆ ವಹಿಸಿದರು. ಇದರ ಜೊತೆಗೆ ಯಾವುದೇ ರೀತಿಯ ಅಡ್ಡ ಮತದಾನ ಆಗಬಾರದು ಎಂದು ಖುದ್ದು ಬೂತ್ ಏಜೆಂಟ್ ಆಗಿ ಮತಗಟ್ಟೆಯಲ್ಲೇ ಕುಳಿತಿದ್ದರು.
ಪಕ್ಷದ ಐಕ್ಯತೆ, ಒಗ್ಗಟ್ಟಿನ ಫಲಿತಾಂಶ: ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, "ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಒಗ್ಗಟ್ಟಿನ ಪ್ರದರ್ಶನದಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಸಿಎಂ ಹಾಗೂ ಎಲ್ಲಾ ಶಾಸಕರಿಗೆ ಅಭಿನಂದನೆಗಳು" ಎಂದರು.
"ಕಾಂಗ್ರೆಸ್ ಅಭ್ಯರ್ಥಿಗಳಾದ ಜಿ.ಸಿ.ಚಂದ್ರಶೇಖರ್ (45 ಮತಗಳು), ನಾಸಿರ್ ಹುಸೇನ್ (47 ಮತಗಳು), ಅಜಯ್ ಮಕೇನ್ (47 ಮತಗಳು) ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ, ವೇಣುಗೋಪಾಲ್ ನಮ್ಮ ಜತೆ ಚರ್ಚೆ ಮಾಡಿ ಮಾರ್ಗದರ್ಶನ ನೀಡುತ್ತಿದ್ದರು. ಅವರನ್ನೂ ಅಭಿನಂದಿಸುತ್ತೇನೆ. ಈ ಸಮಯದಲ್ಲಿ ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ" ಎಂದರು.
ಇದು ಸಾಮಾನ್ಯ ಕನ್ನಡಿಗರ ಗೆಲುವು: ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, "ಸಂಖ್ಯಾಬಲ ಇಲ್ಲದಿದ್ದರೂ ರಿಯಲ್ ಎಸ್ಟೇಟ್ ವ್ಯಕ್ತಿಯನ್ನು ಏಕೆ ಚುನಾವಣೆಗೆ ನಿಲ್ಲಿಸಿದ್ದೀರಿ?. ಇದು 6.5 ಕೋಟಿ ಜನರಿಗೆ ಮಾಡಿದ ಅವಮಾನ" ಎಂದು ಬಿಜೆಪಿಯನ್ನು ಟೀಕಿಸಿದರು.
"ಆಯಾ ರಾಮ್, ಗಯಾ ರಾಂ ರಾಜಕೀಯವನ್ನು ಈ ಚುನಾವಣೆ ತಿರಸ್ಕರಿಸಿದೆ. ಇದು ಕಾಂಗ್ರೆಸ್ ಗೆಲುವಲ್ಲ. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಗೆಲುವೂ ಅಲ್ಲ. ಇದು ಸಮಾನ್ಯ ಕನ್ನಡಿಗರ ಗೆಲುವಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ತಿರಸ್ಕರಿಸಲಾಗಿತ್ತು. ಇದೀಗ ಮತ್ತೆ ರಾಜ್ಯಸಭೆ ಚುನಾವಣೆಯಲ್ಲೂ ಮೈತ್ರಿಯನ್ನು ತಿರಸ್ಕರಿಸಲಾಗಿದೆ. ಇದು ಸಿದ್ಧಾಂತ, ಪ್ರಜಾಪ್ರಭುತ್ವದ ವಿಜಯ. ಕರ್ನಾಟಕದಲ್ಲಿ ಹಣ ಬಲ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್: ಕುಮಾರಸ್ವಾಮಿ