ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್ ಪರ ಮತಯಾಚನೆ ಮಾಡುತ್ತಿದ್ದಾರೆ. ಆರ್.ಆರ್.ನಗರದಲ್ಲಿ ಈ ಬಾರಿ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಗುರಿಯಾಗಿಸಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿದಿದ್ದಾರೆ. ಇದೇ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಸಿಕ್ಕಿದೆ. ಇಲ್ಲಿ ಸುಶಿಕ್ಷಿತರು, ಅಧಿಕಾರಿ ವರ್ಗ, ಉದ್ಯಮಿಗಳು, ಉತ್ತರ ಭಾರತೀಯರು, ಅಪಾರ್ಟ್‌ಮೆಂಟ್ ನಿವಾಸಿಗಳು ಹೆಚ್ಚಿದ್ದಾರೆ.
ಇದನ್ನು ಮನಗಂಡಿರುವ ಡಿಕೆಶಿ, ಕಳೆದ ಒಂದು ವಾರದಿಂದ ಕ್ಷೇತ್ರಗಳಲ್ಲಿನ ವಿವಿಧ ಅಪಾರ್ಟ್‌ಮೆಂಟ್‌ಗಳಿಗೆ ತೆರಳಿ ಮತಬೇಟೆ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್ ವಾಸಿಗಳ ಸಮಸ್ಯೆ, ನೀರಿನ ಬವಣೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಭರವಸೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಗಣನೀಯ ಪ್ರಮಾಣದಲ್ಲಿರುವ ಇಲ್ಲಿನ ಜನರ ಮತ ಗಳಿಸಲು ಕಸರತ್ತು ನಡೆಸುತ್ತಿದ್ದಾರೆ.
ಇಂದು ಆರ್.ಆರ್.ನಗರದಲ್ಲಿನ ಅಪಾರ್ಟ್‌ಮೆಂಟ್‌ಗಳಿಗೆ ರೌಂಡ್ಸ್ ಹಾಕಿ ಮತಯಾಚನೆ ಮಾಡಿದರು. ಡಿ.ಕೆ.ಸುರೇಶ್ ಇಲ್ಲಿನ ಸಂಸದರಾಗಿರುವುದು, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿರುವುದರಿಂದ ನಿಮಗೆ ಅನುಕೂಲವಾಗಲಿದೆ. ನಾನೇ ನೀರಾವರಿ ಸಚಿವನೂ ಆಗಿದ್ದೇನೆ. ನನ್ನ ಕಾಲದಲ್ಲಿ ಈ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಇನ್ಯಾವುದೇ ಕಾಲದಲ್ಲೂ ಬಗೆಹರಿಯುವುದಿಲ್ಲ ಎಂದು ಮನದಟ್ಟು ಮಾಡಲು ಯತ್ನಿಸಿದರು.
ನಮಗೆ ಸಹಾಯ ಮಾಡಿದರೆ ಮಾತ್ರ ನಿಮಗೆ ಸಹಾಯ: ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ನರೇಂದ್ರ ಮೋದಿ ಲೇವಡಿ ಮಾಡುತ್ತಿದ್ದರು. ನಾವು ಗ್ಯಾರಂಟಿ ಘೋಷಣೆ ಮಾಡಿ, ಜಾರಿ ಮಾಡಿದ ನಂತರ ಮೋದಿ ಅವರು ಈಗ ತಮ್ಮ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ನಿಮಗೆ ನೀರು ಕೊಟ್ಟು, ನಿಮ್ಮ ರಸ್ತೆ ಹಾಗೂ ಇತರೆ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ದೆಹಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ಮೋದಿ ಅಲೆ ಇದ್ದಾಗಲೇ ಸುರೇಶ್ 2.30 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಮೋದಿ ಹಾಗೂ ಬಿಜೆಪಿ ಅಲೆ ಇಲ್ಲ. ನೀವೆಲ್ಲರೂ ಶ್ರದ್ಧೆಯಿಂದ ನಮಗೆ ಮತ ನೀಡಬೇಕು. ನೀವು ನಮಗೆ ಸಹಾಯ ಮಾಡಿದಾಗ ಮಾತ್ರ ನಾವು ನಿಮಗೆ ಸಹಾಯ ಮಾಡಬಹುದು ಎಂದರು.
ಮೋದಿ ಅವರಿಂದಲೇ ಕೆಲಸ ಮಾಡಿಸಿ ಅಭ್ಯಂತರವಿಲ್ಲ: ಮೋದಿ ಮುಖ ನೋಡಿ ಮತ ಹಾಕುವುದಾದರೆ ಮೋದಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮ ಪರ ನಿಂತರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ.