ಬೆಂಗಳೂರು: ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸಹಾಯಕ ಆಯುಕ್ತೆ ಮತ್ತು ಭೂಸ್ವಾಧೀನ ಅಧಿಕಾರಿಯಾಗಿದ್ದ ಡಾ.ಸುಧಾ ಅವರು ತನಿಖೆಗೆ ಸಹಕರಿಸದಿದ್ದರೆ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ಲೋಕಾಯುಕ್ತಕ್ಕೆ ನಿರ್ಬಂಧಿಸಿರುವ ಮಧ್ಯಂತರ ಆದೇಶ ತೆರವುಗೊಳಿಸಲಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ದೂರು ಆಧರಿಸಿ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯಡಿ ಸ್ಥಾಪಿತವಾಗಿರುವ ವಿಶೇಷ ನ್ಯಾಯಾಲಯವು 2020ರ ಆಗಸ್ಟ್ 20ರಂದು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ನಿರ್ದೇಶಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಡಾ.ಸುಧಾ ಮತ್ತು ಅವರ ಸಹಾಯಕ ಸ್ಟ್ರೋನಿ ಜೋಸೆಫ್ ಪೈಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು.
ಲೋಕಾಯುಕ್ತ ಪೊಲೀಸ್ ಪರ ಹಾಜರಾಗಿದ್ದ ವಕೀಲರು, ನ್ಯಾಯಾಲಯದ ಆದೇಶದ ಹೊರತಾಗಿಯೂ ಸುಧಾ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ವಿವರಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು, ವಿಶೇಷ ನ್ಯಾಯಾಲಯವು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಇದಲ್ಲದೇ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 5ರ ಅಡಿಯೂ ಪ್ರಕರಣ ದಾಖಲಾಗಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ವಿಶೇಷ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲ. ಜಾರಿ ನಿರ್ದೇಶನಾಲಯದ ಪ್ರಕರಣಗಳ ವಿಚಾರಣೆ ನಡೆಸುವ ಸತ್ರ ನ್ಯಾಯಾಲಯದ ಮುಂದೆ ಈ ಪ್ರಕರಣ ಇಡಬೇಕು. ಅಲ್ಲದೇ, ಸರ್ಕಾರಿ ಅಧಿಕಾರಿಯಾಗಿರುವ ಸುಧಾ ವಿರುದ್ಧ ತನಿಖೆ ನಡೆಸುವಾಗ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಪಡೆಯಬೇಕು. ಆದರೆ, ಅದನ್ನೂ ಪಾಲಿಸಲಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಇದಕ್ಕೆ ಪೂರ್ವಾನುಮತಿಯೇ ಬೇಕಿಲ್ಲ. ಗೊತ್ತಿರುವ ಮೂಲಗಳಿಂದ ಆದಾಯ ಮೀರಿದ ಆಸ್ತಿ ಗಳಿಕೆ ಮಾಡಿದ್ದರೆ ಸೆಕ್ಷನ್ 17ಎ ಅಡಿ ಪೂರ್ವಾನುಮತಿಯೇ ಬೇಕಿಲ್ಲ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಪ್ರಕರಣಗಳಲ್ಲಿ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕಡ್ಡಾಯ ಎಂಬುದಾಗಿ ಇದೇ ಪೀಠ ಆದೇಶ ನೀಡಿದೆ. ಹೀಗಾಗಿ ತನಿಖೆಗೆ ಸಹಕರಿಸಬೇಕು. ಇಲ್ಲವಾದಲ್ಲಿ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ಲೋಕಾಯುಕ್ತಕ್ಕೆ ನಿರ್ಬಂಧಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.