ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವ ವಿಚಾರದಲ್ಲಿ ಬಿಜೆಪಿ ಶಾಸಕರು ಕೇಳಿದ ಪ್ರಶ್ನೆ ಸ್ವಾರಸ್ಯಕರ ಚರ್ಚೆ ಜೊತೆಗೆ ಜಟಾಪಟಿಗೂ ಕಾರಣವಾಯಿತು.
ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಅವರು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿ ಬಿಡುಗಡೆ ಮಾಡಿದೆ. ಆದರೆ, ರೈತರ ಹಿತವನ್ನು ಕಡೆಗಣಿಸಿ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರಿಗೆ ಒಂದು ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. 1 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲೂ ಬಿಜೆಪಿ ಶಾಸಕರಿಗೆ ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಉತ್ತರ ನೀಡಿ, ಅಲ್ಪಸಂಖ್ಯಾತರಿಗಾಗಿ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ. 1 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು. ಅದರಲ್ಲಿ 300 ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು, 165 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ಸದನಕ್ಕೆ ತಿಳಿಸಿದರು.
ವಿಜಯೇಂದ್ರ ಅವರು ಆರೋಪಿಸುವಂತೆ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿಲ್ಲ. 3.71 ಲಕ್ಷ ಕೋಟಿ ಬಜೆಟ್‍ನಲ್ಲಿ 300 ಕೋಟಿ ರೂ. ಮಾತ್ರ ನೀಡಿದ್ದಾರೆ. ಅದು ಬಜೆಟ್ ಗಾತ್ರದ ಶೇ.1 ರಷ್ಟು ಪಾಲು ಆಗುವುದಿಲ್ಲ. ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಪಕ್ಷಬೇಧ ಇಲ್ಲದೆ ಹಣ ನೀಡಿದ್ದೇವೆ. ಬಿಜೆಪಿಯ 29, ಜೆಡಿಎಸ್‍ನ 9 ಶಾಸಕರಿಗೂ ಹಣ ಒದಗಿಸಲಾಗಿದೆ. ಕಾಲೋನಿಗಳನ್ನು ಎ,ಬಿ,ಸಿ ಎಂದು ವರ್ಗೀಕರಿಸಿ ಅಲ್ಪಸಂಖ್ಯಾತರು ಹೆಚ್ಚಿರುವ ಕಾಲೋನಿಗಳಿಗೆ ಗರಿಷ್ಠ 5 ಕೋಟಿ ರೂ.ವರೆಗೂ ಹಣ ನೀಡಲಾಗುತ್ತಿದೆ. 94 ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಕ್ಷೇತ್ರದಲ್ಲಿ 1.20 ಲಕ್ಷ ಅಲ್ಪಸಂಖ್ಯಾತ ಜನಸಂಖ್ಯೆ ಇದೆ. ಆದರೆ ನನಗೆ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ಜಮೀರ್ ಅಹಮ್ಮದ್ ಖಾನ್, ನೀವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದೀರ. ಬುರ್ಖಾ, ಟೋಪಿ ಧರಿಸಿದವರು ನಮ್ಮ ಹತ್ತಿರ ಬರಬೇಡಿ ಎಂದು ಹೇಳಿಕೆ ನೀಡಿರುವುದನ್ನು ನೋಡಿದ್ದೇನೆ. ಕೆಲಸ ಮಾಡುವುದಾದರೆ ಪತ್ರ ಕೊಡಿ. 10 ಕೋಟಿ ರೂ. ಬೇಕಾದರೂ ಅನುದಾನ ಕೊಡುತ್ತೇನೆ ಎಂದರು.
ಇದು ಬಿಜೆಪಿ ಶಾಸಕರನ್ನು ಕೆರಳಿಸಿತು. ಪ್ರತಿಪಕ್ಷದ ನಾಯಕ ಆರ್. ಅಶೋಕ್, ಹಿರಿಯ ಸದಸ್ಯರಾದ ಡಾ.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿ, ಸಚಿವರು ಸರ್ಕಾರವಾಗಿ ಕೆಲಸ ಮಾಡಬೇಕು. ವೈಯಕ್ತಿಕವಾಗಿ ಅಥವಾ ರಾಜಕೀಯವಾಗಿ ನಡೆದುಕೊಳ್ಳಬಹುದು. ಹೇಳಿಕೆಗಳು ಏನೇ ಇರಲಿ, ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಕಡೆಗಣಿಸುವುದು ಅವರಿಗೆ ಮಾಡಿದ ವಂಚನೆ ಎಂದು ಟೀಕಾ ಪ್ರಹಾರ ನಡೆಸಿದರು.
ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಮ್ಮ ಸರ್ಕಾರ ಬಿಜೆಪಿಯ 28 ಶಾಸಕರ ಕ್ಷೇತ್ರಗಳಿಗೂ ಹಣ ನೀಡಿದೆ. ಆದರೆ ಹಿಂದಿನ ಸರ್ಕಾರ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿತ್ತು ಎಂದು ಪ್ರತ್ಯುತ್ತರ ನೀಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ವಿಜಯಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದಾರೆ. ಸರ್ಕಾರ ಅವರ ಅಭಿವೃದ್ಧಿಯನ್ನು ಕಡೆಗಣಿಸುವುದು ಒಳ್ಳೆಯದಲ್ಲ ಎಂದು ಹೇಳಿದರು. ಈ ನಡುವೆ ಬಸನಗೌಡ ಯತ್ನಾಳ್ ಪದೇಪದೇ ಮಾತನಾಡುತ್ತಿದ್ದಾಗ, ನಾನು ನಿಮ್ಮ ಪರವಾಗಿ ಶುಲ್ಕ ಇಲ್ಲದೆ ವಕಾಲತ್ತು ಮಾಡುತ್ತಿದ್ದೇನೆ. ಸ್ವಲ್ಪ ಹೊತ್ತು ತಾಳ್ಮೆಯಿಂದ ಇರಿ ಎಂದು ಯತ್ನಾಳ್ ಅವರಿಗೆ ಸಲಹೆ ನೀಡಿದರು.
ಚರ್ಚೆ ಮುಂದುವರೆಸಿದ ಬೊಮ್ಮಾಯಿ ಅವರು, ರಾಜಕೀಯವಾಗಿ ಮಾತನಾಡುವುದು ಬೇರೆ, ಅಭಿವೃದ್ಧಿ ಬೇರೆ. ವಿಜಯಪುರದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಇನ್ನು ನನ್ನ ಕ್ಷೇತ್ರಕ್ಕೆ 5 ಕೋಟಿ ರೂ. ಕೊಟ್ಟಿರುವುದಾಗಿ ಹೇಳಿದ್ದೀರ. ಬೇರೆಯವರ ಪತ್ರದ ಮೇಲೆ ಹಣ ಕೊಟ್ಟರೆ, ಅಲ್ಲಿ ಯಾವ ಕೆಲಸಗಳಾಗುತ್ತವೆ ಎಂದು ನಮಗೆ ಗೊತ್ತಿರುತ್ತದೆ ಎಂದು ಎಚ್ಚರಿಸಿದರು.
ಯತ್ನಾಳ್ ಅವರ ಆಕ್ಷೇಪಾರ್ಹ ಟೀಕೆಗಳಿಗೆ ಮುಖ್ಯಮಂತ್ರಿಯಾಗಿದ್ದ ನೀವು ಆ ವೇಳೆಯೇ ತಿಳಿ ಹೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜಮೀರ್ ಅಹಮ್ಮದ್ ಖಾನ್ ಅವರು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದರು. ಯತ್ನಾಳ್ ಮಾತನಾಡಿ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ, ಜೈನರು, ಬೌದ್ಧರು ಸೇರುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿ.ವೈ ವಿಜಯೇಂದ್ರ ಅವರು ಸರ್ಕಾರ ದಿವಾಳಿಯಾಗಿದೆ. ಅದಕ್ಕಾಗಿ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ಫಲಾನುಭವಿಗಳಿಗೆ ಆರ್ಥಿಕ ನೆರವು: ಜಮೀರ್ ಅಹ್ಮದ್