ಬೆಂಗಳೂರು: ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವಂತೆ ದೈಹಿಕವಾಗಿ ಶೇ.75 ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ನಿರ್ದೇಶಿಸಲು ಹೈಕೋರ್ಟ್ ನಿರಾಕರಿಸಿದೆ. ಪತ್ನಿಗೆ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಪತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪತಿಯ ತಂದೆಯಾದವರು ಅಂಗವೈಕಲ್ಯದ ದಿನಾಂಕದವರೆಗಿನ ಜೀವನಾಂಶ ಮೊತ್ತದ ಬಾಕಿಯನ್ನು ಪಾವತಿಸಬೇಕು. ಅಲ್ಲದೇ, ಮಗನ ಮಕ್ಕಳ ಶಿಕ್ಷಣ ಮುಂದುವರೆಸಲು ಕ್ರಮ ವಹಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅರ್ಜಿದಾರ ಊರುಗೋಲಿನ ಸಹಾಯದಿಂದ ನಡೆಯುತ್ತಾನೆ. ಆತ ಇನ್ನು ಮುಂದೆ ಉದ್ಯೋಗ ಮಾಡಲು ಅಸಹಾಯಕನಾಗಿದ್ದಾನೆ. ಹಾಗಾಗಿ ಆತನಿಗೆ ಜೀವನಾಂಶ ನೀಡುವಂತೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಪತಿಯ ಅಂಗವೈಕಲ್ಯ ಪ್ರಮಾಣಪತ್ರ ಪರಿಶೀಲಿಸಿದರೆ ಪತಿ ಸಂಪಾದಿಸಲು ಅಸಮರ್ಥನಾಗಿದ್ದಾರೆ. ಪತ್ನಿ ಸಂಪಾದನೆ ಮಾಡುವುದಕ್ಕೆ ಅರ್ಹರಾಗಿದ್ದಾರೆ. ಹೀಗಿದ್ದರೂ ಜೀವನಾಂಶ ಪಾವತಿಸಲು ಹೆಂಡತಿ ಏಕೆ ಮತ್ತು ಹೇಗೆ ಒತ್ತಾಯಿಸುತ್ತಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಪತಿಯಾದವರು ಹೆಂಡತಿ, ಮಗು ನೋಡಿಕೊಳ್ಳಲು ಜವಾಬ್ದಾರರಾಗಿರುತ್ತಾರೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಪತಿಯ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಮುಂದೆ ಉದ್ಯೋಗ ಮಾಡಲು ಮತ್ತು ಹೆಂಡತಿ, ಮಗುವಿಗೆ ಜೀವನಾಂಶ ಪಾವತಿಸಲು ಶಕ್ತನಾಗಿಲ್ಲ. 2013ರ ಡಿಸೆಂಬರ್ನಲ್ಲಿ ಪತಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಅಲ್ಲಿಂದ ಜೀವನಾಂಶ ಪಾವತಿ ಬಾಕಿ ಉಳಿದಿದ್ದು, ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿತ್ತು. ಜೊತೆಗೆ ಪತಿಯಿಂದ ಭರಿಸಬೇಕಾದ ಜೀವನಾಂಶ 19,04,000 ರೂ.ಗಳಿದ್ದು ನಿರ್ವಹಣೆಯ ಅವಧಿಯು ಗಂಡನ ಅಂಗವೈಕಲ್ಯದ ಅವಧಿಯನ್ನು ಒಳಗೊಳ್ಳುತ್ತದೆ. ವಿಚಾರಣಾ ನ್ಯಾಯಾಲಯ ಎಲ್ಲ ಮೊತ್ತ ಪಾವತಿಸಲು ನಿರ್ದೇಶಿಸಿದರೆ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಲಿದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಪತಿಯ ಉಪಯೋಗಕ್ಕಾಗಿ ಆಗುವ ವೆಚ್ಚ ಪರಿಗಣಿಸಿ ಪತ್ನಿಗೆ ಜೀವನಾಂಶ ಕಡಿತಗೊಳಿಸಲಾಗದು: ಹೈಕೋರ್ಟ್
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮತ್ತು ಪ್ರತಿವಾದಿಯ ವೈವಾಹಿಕ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಮುಂದಾದರು. ಪತ್ನಿಯು ಹಿಂದೂ ವಿವಾಹ ಕಾಯ್ದೆಯ 1955 ರ ಸೆಕ್ಷನ್ 24 ರ ಅಡಿಯಲ್ಲಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರು. ಈ ಕುರಿತು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು, ಪತ್ನಿಗೆ ಪ್ರತಿ ತಿಂಗಳು 15,000 ರೂ ಮಧ್ಯಂತರ ಜೀವನಾಂಶ ನೀಡಲು 2012 ಡಿ.30 ರಂದು ಆದೇಶಿಸಿತ್ತು. ಆದರೆ, ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಪತ್ನಿ ನಂತರ ಜುಲೈ 2013 ರಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಮೆಮೊ ಸಲ್ಲಿಸಿದ್ದು, ಆ ಪ್ರಕಾರವಾಗಿ ಪತಿಯಿಂದ ಜೀವನಾಂಶ ಪಾವತಿಸಲು ಬಾಕಿ ಇದೆ ಎಂದು ಹೇಳಲಾಗಿತ್ತು. ಈ ಮೆಮೊವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ಬಾಕಿಯಿರುವಾಗಲೇ ಪತಿಯೂ ಪಾರ್ಶ್ವವಾಯುವಿಗೆ ಒಳಗಾದ ಪರಿಣಾಮವಾಗಿ ಶೇ.75 ಅಂಗವೈಕಲ್ಯಕ್ಕೆ ಒಳಗಾಗಿದ್ದರು, ಇದರಿಂದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಜೀವನಾಂಶ ಪಾವತಿಸದ ಕಾರಣ, ಜೀವನಾಂಶದ ಬಾಕಿ ವಸೂಲಿ ಮಾಡಲು, ಜೀವನಾಂಶದ ಆದೇಶವನ್ನು ಕಾರ್ಯಗತಗೊಳಿಸುವಂತೆ ಕೋರಿ ಪತ್ನಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಪತಿಯ ತಂದೆ, ತಾಯಿಗಳಿಂದ ಜೀವನಾಂಶ ಕೋರಲು ಪತ್ನಿಗೆ ಅವಕಾಶವಿಲ್ಲ: ಹೈಕೋರ್ಟ್