ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಸ್ವಾಮೀಜಿಗಳನ್ನು ಅಪಮಾನಗೊಳಿಸಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್ ಅನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾವಣೆ ಮಾಡಬೇಕು ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.
ಮೂರು ಸಾವಿರಮಠದ ಆವರಣದಲ್ಲಿ ವಿವಿಧ ಸ್ವಾಮೀಜಿಗಳೊಂದಿಗೆ ಚಿಂತನ - ಮಂಥನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬದಲಾವಣೆ ಆಗದಿದ್ದರೆ, ಏಪ್ರಿಲ್ 2 ರಂದು ಮತ್ತೊಮ್ಮೆ ಸಭೆ ನಡೆಸಿ, ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪ್ರಹ್ಲಾದ್ ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದ್ದು, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮುದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು, ಪಕ್ಷ ಅಥವಾ ಸಮಾಜಕ್ಕೆ ಅಲ್ಲ ಎಂದು ಇದೇ ವೇಳೆ ಶ್ರೀಗಳು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರು ಏಕಸ್ವಾಮ್ಯತ್ವವನ್ನು ಸಾಧಿಸುತ್ತಿದ್ದಾರೆ. ಹೀಗಾಗಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಹಾಕಬೇಕು ಎಂದು ಬಿಜೆಪಿ ಹೈಕಮಾಂಡ್ಗೆ ಶ್ರೀಗಳು ಗಡುವು ನೀಡಿದ್ದಾರೆ. ಏ. 2 ರಂದು ಜೋಶಿ ಅವರ ಕ್ಷೇತ್ರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ನೂರಾರು ಮಠಾಧೀಶರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಮತ್ತೊಮ್ಮೆ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕ್ಷೇತ್ರ ತ್ಯಾಗ ಮಾಡಿದಂತೆ ಅವರು ಕೂಡಾ ಕ್ಷೇತ್ರವನ್ನು ತ್ಯಾಗ ಮಾಡಬೇಕು ಎಂದ ಶ್ರೀಗಳು, ಜೋಶಿಯವರಿಗೆ ಚುನಾವಣೆ ಬಂದಾಗ ಮಾತ್ರ ವೀರಶೈವ ಲಿಂಗಾಯತ ಸಮಾಜ ಹಾಗೂ ಇತರ ಸಮಾಜಗಳು ಅವರಿಗೆ ನೆನಪಾಗುತ್ತದೆ. ಅವರ ನಡೆ ನುಡಿ ಬದಲಾಗಿದೆ. ಅವರು ಬಹಳಷ್ಟು ಸಮಾಜವನ್ನು ತುಳಿದಿದ್ದಾರೆ. ಅಲ್ಲದೇ ಮಠಾಧೀಶರಿಗೆ ನೋವು ಕೊಟ್ಟಿದ್ದಾರೆ. ಬಹಳಷ್ಟು ಕಾರ್ಯಕರ್ತರನ್ನು ತುಳಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜಕೀಯ ನಾಯಕರಾಗಿ ಅವರು ಇಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜೋಶಿಯವರಿಗೆ ಬೇರೆ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು. ನಮ್ಮ ಕಡೆಯಿಂದ ಸದ್ಯಕ್ಕೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಇಲ್ಲವಾದರೆ ಏ. 2ರಂದು ನಮ್ಮ ನಿರ್ಧಾರ ಮಾಡಬೇಕಾಗುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.
ಉತ್ತರ ಭಾರತದಲ್ಲಿ ಸಾಧು - ಸಂತರು ರಾಜಕಾರಣ ಮಾಡುತ್ತಾರೆ. ಆ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ರಾಜಕೀಯ ಪಕ್ಷ ಸೇರಿ ನಿಲ್ಲಬೇಕೋ ಬೇಡವಾ ಎಂದು ಮಠಾಧೀಶರು ನಿರ್ಣಯ ತೆಗೆದುಕೊಂಡಿದ್ದಾರೆ. ಈ ವಿಚಾರವಾಗಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದ್ದು, ಅಪಸ್ವರ ಎತ್ತಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.
ಇದನ್ನೂ ಓದಿ : ಚುನಾವಣೆಗೆ ಸ್ಪರ್ಧೆ: ನಾಳೆ ಮಠಾಧೀಶರ ಸಭೆ ಬಳಿಕ ನಿರ್ಧಾರ - ದಿಂಗಾಲೇಶ್ವರ ಸ್ವಾಮೀಜಿ - DHARWAD LOK SABHA CONSTITUENCY