ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಶಾಂತ ರೀತಿಯ ಮತದಾನವಾಗಿದ್ದು, 18 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆ ಸೇರಿದೆ. ಮತದಾನ ಪ್ರಕ್ರಿಯೆ ಬಳಿಕ ಸಿಬ್ಬಂದಿ ಇವಿಎಂ ಯಂತ್ರಗಳನ್ನು ಪ್ಯಾಕ್ ಮಾಡಿ ಪೊಲೀಸ್ ಬಂದೋಬಸ್ತ್ನಲ್ಲಿ ಸ್ಟ್ರಾಂಗ್ ರೂಮ್‌ನಲ್ಲಿ ತಂದಿರಿಸಿದ್ದಾರೆ.
ಶೇ.74.35ರಷ್ಟು ಮತದಾನ: ಮಂಗಳವಾರ ರಾತ್ರಿ 9 ಗಂಟೆಯವರೆಗೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಅಂತಿಮವಾಗಿ ಶೇ.74.35ರಷ್ಟು ಮತದಾನವಾಗಿದೆ. 2019ರಲ್ಲಿ ಶೇ.70.12ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.4ಕ್ಕೂ ಹೆಚ್ಚು ಮತದಾನವಾಗಿದೆ.
ಧಾರವಾಡ ಮತಕ್ಷೇತ್ರ ವ್ಯಾಪ್ತಿಗೊಳಪಡುವ 8 ವಿಧಾನಸಭಾ ಮತಕ್ಷೇತ್ರಗಳಾದ ನವಲಗುಂದ ಕ್ಷೇತ್ರದಲ್ಲಿ ಶೇ.76.92 ಮತದಾನವಾದರೆ, ಕುಂದಗೋಳದಲ್ಲಿ ಶೇ.80, ಧಾರವಾಡದಲ್ಲಿ ಶೇ.75.83, ಹುಬ್ಬಳ್ಳಿ ಧಾರವಾಡ (ಪೂರ್ವ) ಕ್ಷೇತ್ರದಲ್ಲಿ ಶೇ.73.48, ಹುಬ್ಬಳ್ಳಿ ಧಾರವಾಡ (ಸೆಂಟ್ರಲ್) ಕ್ಷೇತ್ರದಲ್ಲಿ ಶೇ.66.85, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದಲ್ಲಿ ಶೇ.67.16, ಕಲಘಟಗಿ ಕ್ಷೇತ್ರದಲ್ಲಿ ಶೇ.82.26, ಶಿಗ್ಗಾಂವ ಕ್ಷೇತ್ರದಲ್ಲಿ ಶೇ.77.24ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಗೆ ಎಲ್ಲ 1,893 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ 9 ಗಂಟೆವರೆಗೆ ಕ್ಷೇತ್ರದಲ್ಲಿ ಶೇ.9.38 ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ 24 ರಷ್ಟು ಮತದಾನ ಆಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40.61 ರಷ್ಟು ಮತದಾನ ದಾಖಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಶೇ. 55 ರಷ್ಟು ಮತ ಚಲಾವಣೆಗೊಂಡಿದೆ. ಸಂಜೆ 5 ಗಂಟೆವರೆಗೆ ಶೇ.67.15 ಮತದಾನವಾಗಿತ್ತು. ರಾತ್ರಿ 9 ಗಂಟೆವರೆಗೆ ಕ್ಷೇತ್ರದಲ್ಲಿ ಅಂತಿಮವಾಗಿ ಶೇ. 74.35 ಮತದಾನವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಗೀತು ಲೋಕಸಭೆ ಚುನಾವಣೆ: 2ನೇ ಹಂತದಲ್ಲಿ ಶೇ 70.03 ಮತದಾನ - Lok Sabha Election In Karnataka