ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವರುಣನ ಅವಕೃಪೆ ಎದುರಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಪಂದ್ಯದ ಐದೂ ದಿನದಾಟಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಅದಾಗ್ಯೂ ಸಹ ಮಳೆ ಬಿಡುವು ನೀಡಿದರೆ, ಎಂ. ಚಿನ್ನಸ್ವಾಮಿ ಮೈದಾನವನ್ನು ತ್ವರಿತವಾಗಿ ಆಟಕ್ಕೆ ಅಣಿಗೊಳಿಸಲು ಸಾಧ್ಯವಿದೆ. ಅತ್ಯಾಧುನಿಕ ಸಬ್ಏರ್ ಸಿಸ್ಟಂ ಮೂಲಕ ಮೈದಾನದ ಹೊರಾಂಗಣವನ್ನು ಬಹುಬೇಗ ಒಣಗಿಸಬಹುದಾಗಿದೆ.
ಏನಿದು ಸಬ್ ಏರ್ ಸಿಸ್ಟಮ್?: ಮಳೆ ಬಂದಾಗ ಎದುರಾಗುವ ಸವಾಲನ್ನು ತ್ವರಿತವಾಗಿ ನಿಭಾಯಿಸಲು ಸಬ್ಏರ್ ಸಿಸ್ಟಮ್ (Subsurface Aeration And Vacuum-Powered Drainage System) ಉಪಯುಕ್ತವಾಗಿದೆ. ಸಾಮಾನ್ಯವಾಗಿ ಯಾವುದೇ ಕ್ರೀಡಾಂಗಣದಲ್ಲಿ ಮಳೆಯಾದಾಗ ಪಿಚ್ ಅನ್ನು ಕವರ್ ಮಾಡಲಾಗುತ್ತದೆ. ಜೊತೆಗೆ, ಅದರ ಹೊರಾಂಗಣವನ್ನು ಒಣಗಿಸಲು ರೋಲರ್ ಮತ್ತು ನೀರನ್ನು ಇಂಗಿಸುವ ಯಂತ್ರಗಳ ಮೊರೆ ಹೋಗಲಾಗುತ್ತದೆ. ಆದರೆ ಸಬ್ಏರ್ ಸಿಸ್ಟಮ್ ನೀರಿನಿಂದ ತೊಯ್ದ ಹೊರಾಂಗಣವನ್ನು ಕೆಲವೇ ನಿಮಿಷಗಳಲ್ಲಿ ಒಣಗಿಸುತ್ತದೆ.
It's still raining here in Bengaluru 🌧️
— BCCI (@BCCI) October 16, 2024
The wait continues ⏳
The first session has unfortunately been washed out.
Match Centre - https://t.co/FS97Llv5uq#TeamIndia | #INDvNZ | @IDFCFIRSTBank pic.twitter.com/BUDWJ8Mw1v
ಅತ್ಯಾಧುನಿಕ ಕಾರ್ಯನಿರ್ವವಣೆ ಹೇಗೆ?: ಈ ಸಿಸ್ಟಮ್ನಲ್ಲಿ ಮೈದಾನದ ಹೊರಾಂಗಣದ ಒಳಗೆ ಅಂದರೆ, ಸುಮಾರು ಅರ್ಧದಿಂದ ಒಂದು ಅಡಿ ಅಳದಲ್ಲಿ ಪೈಪ್ಗಳನ್ನು ಅಳವಡಿಸಲಾಗಿದೆ. ಆ ಪೈಪ್ಗಳಲ್ಲಿ ಸಂಗ್ರಹವಾಗುವ ನೀರನ್ನು ಹೀರಲು ಅತ್ಯಾಧುನಿಕ ಯಂತ್ರವನ್ನೂ ಕ್ರೀಡಾಂಗಣದಲ್ಲಿ ಅಳವಡಿಕೆ ಮಾಡಲಾಗಿದೆ. ಒಮ್ಮೆ ಮಳೆ ಆರಂಭವಾದ ತಕ್ಷಣ ಸಬ್ಏರ್ ಸಿಸ್ಟಮ್ ನೀರನ್ನು ಹೀರುವ ಕಾರ್ಯದಲ್ಲಿ ತೊಡಗುತ್ತದೆ. ಅಲ್ಲದೆ, ನೀರನ್ನು ಸಂಪೂರ್ಣವಾಗಿ ಹೀರಿದ ಬಳಿಕ ಅದೇ ಪೈಪ್ಗಳ ಮೂಲಕ ಬಿಸಿ ಗಾಳಿಯನ್ನು ಹೊರಸೂಸುತ್ತದೆ. ಇದರಿಂದಾಗಿ ಮೈದಾನದ ಹೊರಾಂಗಣದ ನೀರನ್ನು ತೆಗೆದು ಮೈದಾನವನ್ನು ಒಣಗಿಸಲು ನೆರವಾಗುತ್ತದೆ. ಈಗಾಗಲೇ ವಿಶ್ವದ ಕೆಲ ಬೇಸ್‌ಬಾಲ್, ಫುಟ್ಬಾಲ್, ರಗ್ಬಿ ಹಾಗೂ ಗಾಲ್ಫ್ ಕ್ರೀಡಾಂಗಣಗಳಲ್ಲಿ ಸಬ್ಏರ್ ಸಿಸ್ಟಮ್ ಕಾರ್ಯ ನಿರ್ವಹಿಸುತ್ತಿದೆ. 2017ರಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣ ಈ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಲಾಗಿದೆ.
ನೀರನ್ನು ಮಾತ್ರ ಹೇಗೆ ಹೀರುತ್ತದೆ?: ಸಬ್ಏರ್ ಸಿಸ್ಟಮ್ ಮಳೆಯ ನೀರಿನ ಜೊತೆ ಮೈದಾನದ ಹೊರಾಂಗಣದ ಮಣ್ಣು ಒಳ ಸೇರದಂತೆ ಎಚ್ಚರಿಕೆ ವಹಿಸಲು ಜಲ್ಲಿಕಲ್ಲುಗಳ ವ್ಯವಸ್ಥೆ ಇದೆ. ಆದ್ದರಿಂದ ಮೈದಾನದ ಹುಲ್ಲಿನ ಮೇಲೆ ಬೀಳುವ ಮಳೆ ನೀರು ಸಣ್ಣ ಸಣ್ಣ ಪೈಪ್ಗಳ ಮೂಲಕ ಸೇರಿ ಬಳಿಕ ಮುಖ್ಯ ಪೈಪ್ಗೆ ತಲುಪುತ್ತದೆ. ಬಳಿಕ ಆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.
ಒಂದು ಸಬ್ಏರ್ ಯಂತ್ರದ ಬೆಲೆ ಸುಮಾರು 3.5 ಕೋಟಿ ರೂ.ಗಳಿದೆ. ಯುಎಸ್ಎ ಮೂಲದ ಸಬ್ಏರ್ ಕಂಪನಿಯ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಎನ್ನುವ ಸಂಸ್ಥೆಯು ಈ ವ್ಯವಸ್ಥೆ ಅಳವಡಿಸಿಕೊಟ್ಟಿದೆ.
ಇದನ್ನೂ ಓದಿ: ಭಾರತ - ನ್ಯೂಜಿಲೆಂಡ್ ಮೊದಲ ಟೆಸ್ಟ್ಗೆ ವರುಣನ ಅಡ್ಡಿ; ಮಳೆ ಲೆಕ್ಕಿಸದೇ ಜಮಾಯಿಸಿದ ಅಭಿಮಾನಿಗಳು