ಹಾವೇರಿ : ಜಿಲ್ಲೆಯಾದ್ಯಂತ ಕಳೆದ ಮೇ ತಿಂಗಳಿಂದ ಏರುಗತಿಯಲ್ಲಿದ್ದ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇದೀಗ ಇಳಿಮುಖವಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಆಗಮಿಸುವ ಜ್ವರಪೀಡಿತರ ಸಂಖ್ಯೆ ಕಳೆದ ಒಂದು ವಾರದಿಂದ ಇಳಿಮುಖವಾಗಿದೆ. ಡೆಂಗ್ಯೂ ಸೇರಿದಂತೆ ಇತರ ಜ್ವರಪೀಡಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ ಆರ್ ಹಾವನೂರು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಅವರು, ಏಪ್ರಿಲ್ನಿಂದ ಆರಂಭವಾಗಿದ್ದ ಡೆಂಗ್ಯೂ ಮತ್ತು ಇತರ ಜ್ವರದ ಪ್ರಕರಣಗಳ ಸಂಖ್ಯೆ ಜುಲೈ ಅಂತ್ಯದವರೆಗೆ ಏರಿಕೆಯಾಗುತ್ತಲೇ ಸಾಗಿದ್ದವು. ಇದೀಗ ಆಗಸ್ಟ್ ಮೊದಲ ವಾರದಿಂದ ಜಿಲ್ಲಾಸ್ಪತ್ರೆಗೆ ಆಗಮಿಸುವ ಡೆಂಗ್ಯೂ ಮತ್ತು ಇತರ ಜ್ವರಪೀಡಿತರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಮೊದಮೊದಲು ಪ್ರತಿದಿನ ಜಿಲ್ಲಾಸ್ಪತ್ರೆಗೆ ದಿನಕ್ಕೆ 110 ರಿಂದ 120 ರೋಗಿಗಳು ಜ್ವರದಿಂದ ಬಾಧಿತರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದರು. ಅದರಲ್ಲಿ ಶಂಕಿತ ಡೆಂಗ್ಯೂ ಸೇರಿದಂತೆ ಇತರ ಜ್ವರಪೀಡಿತರು ಸಹ ದಾಖಲಾಗುತ್ತಿದ್ದರು. ಈಗ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಪ್ರಸ್ತುತ ದಿನಗಳಲ್ಲಿ ದಿನಕ್ಕೆ 60 ರಿಂದ 70 ಜ್ವರಪೀಡಿತರು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಶಂಕಿತ ಡೆಂಗ್ಯೂ ಪ್ರಕರಣಗಳಾಗಿದ್ದು, ಅವುಗಳಲ್ಲಿ
ಎಲೀಸಾ ಪರೀಕ್ಷೆಯಲ್ಲಿ ಒಬ್ಬರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಾರ್ವಜನಿಕರು ನಿರ್ಲಕ್ಷ್ಯವಹಿಸದಂತೆ ಮನವಿ ಮಾಡಿದ್ದಾರೆ.
ಮಳೆಗಾಲ ಮುಗಿಯುವವರೆಗೆ ಈ ಡೆಂಗ್ಯೂ, ಮಲೇರಿಯಾ ಸೇರಿದಂತೆ ಇತರ ಜ್ವರ ಹರಡುವ ಸೊಳ್ಳೆಗಳ
ಸಂಖ್ಯೆ ಅಧಿಕವಾಗಿರುತ್ತದೆ. ಈ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದಲ್ಲದೆ ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ ಇರುವಂತೆ ನೋಡಿಕೊಳ್ಳುವಂತೆ ಹಾವನೂರು ತಿಳಿಸಿದ್ದಾರೆ.
ಮಳೆಯ ನೀರು ನಿಲ್ಲುವ ತೆಂಗಿನಚಿಪ್ಪುಗಳು, ಟೈರ್ಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದು ಮಳೆನೀರು ನಿಲ್ಲದಂತೆ ನೋಡಿಕೊಳ್ಳಿ. ಮಲಗುವ ಮುನ್ನ ಸೊಳ್ಳೆಪರದೆ ಮತ್ತು ಸೊಳ್ಳೆಬತ್ತಿಗಳ ಬಳಕೆಯಿಂದ ಸೊಳ್ಳೆಗಳನ್ನ ನಿಯಂತ್ರಿಸಬೇಕು. ಮಿನರಲ್ ವಾಟರ್ ಬಳಸದವರು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಮತ್ತು ಯಾವುದೇ ತರದ ಜ್ವರದ ಲಕ್ಷಣಗಳು ಕಂಡುಬಂದರೆ ಮನೆಯಲ್ಲಿ ಸ್ವವೈದ್ಯ ಮಾಡಿಕೊಳ್ಳದೆ ವೈದ್ಯರನ್ನ ಕಾಣುವಂತೆ ಹೇಳಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಯಿಂದ ಶಂಕಿತ ಡೆಂಗ್ಯೂ ಪ್ರಕರಣಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ರೋಗಿಯ ಪ್ಲೇಟ್ಲೇಟ್ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಾಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್, ಏಪ್ರಿಲ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಡೆಂಗ್ಯೂ ಮತ್ತು ಇತರ ಜ್ವರಬಾಧಿತರು ಚಿಕಿತ್ಸೆ ಪಡೆದಿದ್ದಾರೆ. ಈ ಸಂಖ್ಯೆ ಮೇ, ಜೂನ್ನಲ್ಲಿ ಹೆಚ್ಚಾಗಿ ಜುಲೈ ಅಂತ್ಯದಿಂದ ಇಳಿಮುಖವಾಗುತ್ತಿದೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಕಡಿಮೆ ಇದೆ. ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗಳಿಗಾಗಿ ಮಾಡಿದ ವಿಶೇಷ ವಾರ್ಡ್‌ಗಳು ಖಾಲಿ ಖಾಲಿಯಾಗಿವೆ. ಇರಲಿ ಎನ್ನುವುದಕ್ಕೆ ಒಂದೊಂದು ವಾರ್ಡ್ನ್ನ ಡೆಂಗ್ಯೂಗೆ ಸಂಬಂಧಿಸಿದಂತೆ ಇಟ್ಟುಕೊಂಡಿದ್ದೇವೆ. ಉಳಿದಂತೆ ಜ್ವರ ರೋಗಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಜಿಲ್ಲಾಸ್ಪತ್ರೆಗೆ ಒಳರೋಗಿಗಳ ಸಂಖ್ಯೆ ಸಹ ಇಳಿಮುಖವಾಗಿದ್ದು,
ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳು ರೋಗಿಗಗಳಿಲ್ಲದೆ ಖಾಲಿ ಖಾಲಿಯಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ : ಶಂಕಿತ ಡೆಂಗ್ಯೂ: ಬೆಳಗಾವಿ, ಹುಬ್ಬಳ್ಳಿಯಲ್ಲಿ ಇಬ್ಬರು ಬಾಲಕಿಯರು ಸಾವು - ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - Dengue Fever