ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಹಾವುಗಳ ಕಳೇಬರಗಳು ಸಿಕ್ಕಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಹೊಳೆನರಸೀಪುರ ಪಟ್ಟಣದ ಬಿ.ಎಚ್ ರಸ್ತೆಗೆ ಹೊಂದಿಕೊಂಡಿರುವ ಹಾಸನ - ಮೈಸೂರು ಹೆದ್ದಾರಿಯ ದರ್ಜಿ ಬೀದಿ ಒಳ ಚರಂಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಹಾವುಗಳ ಕಳೇಬರಗಳು ಪತ್ತೆಯಾಗಿವೆ.
ಹತ್ತಾರು ಹಾವುಗಳನ್ನು ಕೊಂದು ಅವುಗಳ ಚರ್ಮ ಹಾಗೂ ದೇಹದೊಳಗಿನ ನಿರುಪಯುಕ್ತ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಾತ್ರಿ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ.
ಗುರುವಾರ ಬೆಳಗ್ಗೆ ಎಂದಿನಂತೆ ಪುರಸಭೆಯ ತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿ ತ್ಯಾಜ್ಯವನ್ನು ಚರಂಡಿಯಿಂದ ಹೊರತೆಗೆಯುವ ವೇಳೆ ರಕ್ತಸಿಕ್ತ ಪ್ಲಾಸ್ಟಿಕ್ ಚೀಲ ಕಂಡು ಗಾಬರಿಯಾಗಿದ್ದಾರೆ. ಬಳಿಕ ಅದನ್ನು ಸ್ಥಳೀಯರ ಸಮ್ಮುಖದಲ್ಲಿ ಓಪನ್ ಮಾಡಿ ನೋಡಿದಾಗ ಹತ್ತಾರು ಹಾವುಗಳ ಕಳೇಬರಗಳು ದೊರೆತಿವೆ.
ಈ ಬಗ್ಗೆ ಮಾತನಾಡಿರುವ ಬಡಾವಣೆಯ ನಿವಾಸಿ ಹರೀಶ್ ಗೌಡ, ''ರೈತಸ್ನೇಹಿ ಹಾಗೂ ವನ್ಯಜೀವಿ ಪ್ರಾಣಿಗಳ ಸಂರಕ್ಷಣೆ ಕಾಯ್ದೆಯಡಿ ರಕ್ಷಿಸಬೇಕಾದ ಹಾವುಗಳನ್ನು ಕೊಂದು ಹಾಕಿರುವುದು ಅನುಮಾನ ಮೂಡಿಸುತ್ತಿದೆ. ಈ ರೀತಿ ಕೊಂದು ಎಸೆದಿರುವ ಘಟನೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದಿದೆ. ಇದರಿಂದ ನಮ್ಮ ಬಡಾವಣೆಯಲ್ಲಿ ಅತಂಕ ಉಂಟು ಮಾಡಿದೆ. ಕಾನೂನು ಉಲಂಘನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೊಡಗು: ನಡುರಸ್ತೆಯಲ್ಲಿ ರಾಜಾರೋಷವಾಗಿ ಕಾಡಾನೆ ಸಂಚಾರ