ಬೆಂಗಳೂರು: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. 40 ವರ್ಷದ ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗೆ ಮಂಕಿಪಾಕ್ಸ್ ತಗುಲಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರೋಗ್ಯ ಇಲಾಖೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮಂಕಿಪಾಕ್ಸ್ ಸೋಂಕು ಇರುವುದನ್ನು ಖಚಿತಪಡಿಸಿದೆ. ಸೋಂಕಿತ 19 ವರ್ಷದಿಂದ ದುಬೈಯಲ್ಲಿ ವಾಸವಾಗಿದ್ದು, ಜನವರಿ 17ಕ್ಕೆ ಮಂಗಳೂರಿಗೆ ಆಗಮಿಸಿದ್ದರು. ಅವರಿಗೆ ತುರಿಕೆ ಹಾಗೂ ಜೊತೆಗೆ ಜ್ವರದ ಲಕ್ಷಣ ಕಂಡು ಬಂದಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಯಿತು. ಅವರ ರಕ್ತದ ಮಾದರಿಯನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು.
ಮಂಕಿಪಾಕ್ಸ್ ಲಘು ರೋಗ ಲಕ್ಷಣ: ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ಮಂಕಿಪಾಕ್ಸ್ ಲಘುವಾದ ರೋಗ ಲಕ್ಷಣ ಇರುವ ಸೋಂಕಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಾಗೂ ಬಹುರೋಗ ಲಕ್ಷಣ ಇರುವವರಲ್ಲಿ ಮಂಕಿಪಾಕ್ಸ್ ತೀವ್ರತೆ ಕಾಣುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: ವಾಕಿಂಗ್ ಸಮಯದಲ್ಲಿ ಆಗುವ ಕೆಲವು ತಪ್ಪುಗಳನ್ನು ತಡೆಯೋದು ಹೇಗೆ?
ಮಂಕಿಪಾಕ್ಸ್ ಸಾಮಾನ್ಯವಾಗಿ ನಿಕಟ ಸಂಪರ್ಕದ ಮೂಲಕ ಮಾತ್ರ ಹರಡುತ್ತದೆ. ಕೋವಿಡ್ ರೀತಿ ಇದು ಗಂಭೀರ ಸ್ವರೂಪದ ಸೋಂಕು ಅಲ್ಲ. ಸೋಂಕಿತ ವ್ಯಕ್ತಿಯ ಪತ್ನಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಪ್ರಾಥಮಿಕ ಸಂಪರ್ಕವೆಂದು ಪರಿಗಣಿಸಲಾಗಿದೆ. ಅವರಿಗೆ ಸ್ವಲ್ಪ ದಿನ ಪ್ರತ್ಯೇಕವಾಗಿ ಇರಲು ಸಲಹೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಲಕ್ಷಣ ಕಂಡು ಬಂದರೆ ಎಚ್ಚರ ವಹಿಸಿ: ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ವಿದೇಶ ಪ್ರಯಾಣದಿಂದ ಮರಳಿದ ವ್ಯಕ್ತಿಗಳಲ್ಲಿ ತುರಿಕೆ, ಜ್ವರ, ಚಳಿ, ಬೆವರು, ಕಫದಂಥ ರೋಗ ಲಕ್ಷಣ ಕಂಡು ಬಂದರೆ ಪರೀಕ್ಷೆಗೊಳಗಾಗುವುದು ಉತ್ತಮ. ವಿದೇಶಿ ಪ್ರವಾಸಿಗರಿಗೆ ಎಂಪಾಕ್ಸ್ ಸಂಬಂಧ ಕಡ್ಡಾಯ ಪರೀಕ್ಷೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಟೈಪ್-2 ಡಯಾಬಿಟಿಸ್ಗೆ ಭಯಪಡಬೇಡಿ, ತಜ್ಞರ ಸೂಚಿಸಿದ ಸಲಹೆಗಳಿಂದ ಶುಗರ್ ಲೆವಲ್ ನಿಯಂತ್ರಿಸಿ