ಬೆಳಗಾವಿ: ''ರೈತರು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯ ಉಳಿಸಲು ಬಿಜೆಪಿ ಸೋಲಿಸಬೇಕು'' ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಸ್ವಾತಂತ್ರ್ಯದ ನಂತರ ಬಂದ ಎಲ್ಲ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡಿವೆ. ಅವುಗಳ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಆದರೆ, ಹಿಂದಿನ ಸರ್ಕಾರಗಳಿಂತಲೂ ಹೆಚ್ಚು ತೊಂದರೆ ಮೋದಿ ಸರ್ಕಾರದಲ್ಲಿ ಆಗಿದೆ. ಮಹದಾಯಿ ಯೋಜನೆಯಲ್ಲಿ ತೀರ್ಪು ಬಂದಿದೆ. ಹಿಂದೆ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಈವರೆಗೂ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಹೇಳಿ 1 ರೂ. ಅನುದಾನ ಬಿಡುಗಡೆ ಮಾಡಿಲ್ಲ. ಕೃಷ್ಣಾ, ಕಾವೇರಿ, ತುಂಗಭದ್ರಾ ನೀರಾವರಿ ಯೋಜನೆಗಳಲ್ಲಿ ಅನ್ಯಾಯ ಮಾಡಲಾಗಿದೆ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಲಿಲ್ಲ. ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ಪ್ರಚಾರಕ್ಕೆ ಜನ ಬಿಡುತ್ತಿಲ್ಲ. ಇದು ಮೋದಿ ಅವರ ಆತಂಕಕ್ಕೆ ಕಾರಣವಾಗಿದೆ. ರೈತ ಸಂಕುಲ ಉಳಿಯಲು ಈ ಸರ್ಕಾರ ಕಿತ್ತೊಗೆಯಬೇಕಿದೆ'' ಎಂದು ಅಭಿಪ್ರಾಯಪಟ್ಟರು.
ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ''ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಮತ ನೀಡದಂತೆ ರೈತ ಸಂಘ ನಿರ್ಣಯ ತೆಗೆದುಕೊಂಡಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಮೋದಿ ಬರೀ ಸುಳ್ಳು ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ಸಭೆಯಲ್ಲಿ ರೈತ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಸಾಲ ಮನ್ನಾ ಮಾಡಲಿಲ್ಲ. 28 ಉದ್ಯಮಿಗಳ 20 ಲಕ್ಷ 47 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ತೆರಿಗೆ ದುಡ್ಡು ಒಯ್ದು ಕಾರ್ಪೋರೇಟ್ ಕಂಪನಿಗಳಿಗೆ ಕೊಟ್ಟರು. ಇದು ದೊಡ್ಡ ಮೋಸ'' ಎಂದು ಆರೋಪಿಸಿದರು.
ಎಲ್ಲಿಯೂ ಮೋದಿ ಗಾಳಿ, ಹೆಸರಿಲ್ಲ- ಚಾಮರಸ ಮಾಲಿಪಾಟೀಲ: ''ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಎರಡನೇ ಬಾರಿ ಅಧಿಕಾರಕ್ಕೆ ಬಂದು ಏನೂ ಮಾಡಲಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದರು. ಬೀಜ, ಗೊಬ್ಬರ ದರ ಹೆಚ್ಚಿಸಿದರು. ಫಸಲ್ ಬೀಮಾ ವಿಮೆ ಯೋಜನೆಯಡಿಯೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ರೈತ ಸಂಘದಿಂದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು. ಕರ್ನಾಟಕ ಸರ್ಕಾರ ಕೂಡ ಹೋರಾಟ ಮಾಡಿತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ 3,600 ಕೋಟಿ ಅಷ್ಟೇ ಪರಿಹಾರ ರಾಜ್ಯಕ್ಕೆ ಕೊಟ್ಟಿದ್ದಾರೆ. ಕೃಷಿ ಭೂಮಿಗಳು ಕಾರ್ಪೋರೇಟ್ ಕಂಪನಿಗಳ ಪಾಲಾಗಬೇಕೆಂದು. ಈ ರೀತಿ ರೈತರ ಕುತ್ತಿಗೆ ಕೊಯ್ಯುತ್ತಿದ್ದಾರೆ. ಪ್ರವಾಹ, ಬರಗಾಲದಲ್ಲಿ ಬಾರದ ಪ್ರಧಾನಿ ಮೋದಿ ಚುನಾವಣೆಗೋಸ್ಕರ ಬರುತ್ತಿದ್ದಾರೆ. ಇವ್ರು ಮಾಡಿರುವ ದ್ರೋಹಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಎಲ್ಲಿಯೂ ಮೋದಿ ಗಾಳಿ, ಹೆಸರಿಲ್ಲ. ಅವರ ಪ್ಲಾನ್ ಉಲ್ಟಾ ಪಲ್ಟಿ ಆಗಿದೆ. ರಾಜಕೀಯವಾಗಿ ಜಾಗೃತಿಗೊಳಿಸಿ ಇವರನ್ನು ಅಧಿಕಾರದಿಂದ ಕೆಳಗಿಸುತ್ತೇವೆ'' ಎಂದು ಚಾಮರಸ ಮಾಲಿಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ರವಿಕಿರಣ ಪುಣಚ, ಬಸವರಾಜ ಮೊಖಾಶಿ, ಸುರೇಶ ಕರವಿನಕೊಪ್ಪ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಹೆಚ್ ಡಿ ರೇವಣ್ಣ - HD Revanna Case