ಬೆಂಗಳೂರು: "ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನೀಡಿದ್ದ ಪತ್ರಿಕಾ ಜಾಹೀರಾತು ಆಧಾರದಲ್ಲಿ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ" ಎಂದು ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ.
ಇಂದು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಾಹೀರಾತು ನೀಡಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಮನಸೋಇಚ್ಛೆ ಮಾತನಾಡಿತ್ತು. ಇದರ ವಿರುದ್ಧ ಕೇಶವ ಪ್ರಸಾದ್ ಖಾಸಗಿ ದೂರು ಸಲ್ಲಿಸಿದ್ದರು. ಇದರ ಆಧಾರದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ಜಾರಿಯಾಗಿದೆ. ಈ ಪ್ರಕರಣದ ಪರಿಶೀಲನೆ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಹಾಜರಾಗಿ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಕಳುಹಿಸಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಮಗೆ ಸಿಕ್ಕುತ್ತಿಲ್ಲ. ಪ್ರವಾಸದಲ್ಲಿದ್ದು, ಸಮನ್ಸ್ ನೀಡಲಾಗಿಲ್ಲ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ಗರಂ ಆದ ಕೋರ್ಟ್, ಸಿಎಂ, ಡಿಸಿಎಂ ಕೈಗೆ ಸಿಗಲ್ಲ ಎನ್ನುವ ನೀವು ಅಪರಾಧಿಗಳನ್ನು ಹೇಗೆ ಹಿಡಿಯುತ್ತೀರಿ? ಸಮನ್ಸ್ ಜಾರಿ ಮಾಡಲೇಬೇಕು ಎಂದು ಸೂಚಿಸಿದೆ. ಏಪ್ರಿಲ್ 29 ರಂದು ಸಿಎಂ, ಡಿಸಿಎಂ ಹಾಜರಾಗಬೇಕು. ಜೂನ್ ಮೊದಲ ವಾರ ರಾಹುಲ್ ಗಾಂಧಿ ಹಾಜರಾಗಬೇಕು ಎಂದು ಕೋರ್ಟ್ ಹೇಳಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಎನ್ನುವುದು ಗೊತ್ತಾಗಲಿದೆ" ಎಂದರು.
"ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದನ್ನು ಖಂಡಿಸುತ್ತೇನೆ. ಇದು ಸರಿಯಲ್ಲ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಬಳಸಿದ ಫೋಟೋ ಮತ್ತು ಪದಗಳು ಅತ್ಯಂತ ಖಂಡನೀಯ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ವಿಚಾರದಲ್ಲಿ ಮೌನವಾಗಿರುವುದು ಅಚ್ಚರಿಯಾಗಿದೆ. ಕಾಂಗ್ರೆಸ್ ಕ್ಷಮೆ ಯಾಚಿಸಬೇಕು. ಚುನಾವಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಬೇಕು" ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, "ಮಹಿಳೆಯರಿಗೆ ಎಷ್ಟು ಟಿಕೆಟ್ ಕೊಟ್ಟರೂ ಸಮಾಧಾನ ಇರಲ್ಲ. ನಮ್ಮಲ್ಲಿ ಇಬ್ಬರಿಗೆ ಕೊಟ್ಟಿರುವುದು ನಮಗೆ ಖುಷಿ ಇದೆ. ಕಾಂಗ್ರೆಸ್ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಗಾಗಿ ಆರು ಮಹಿಳೆಯರಿಗೆ ಟಿಕೆಟ್ ನೀಡಿದಂತಿದೆ. ನಮಗೂ ಇನ್ನು ಹೆಚ್ಚು ಸ್ಥಾನದ ನಿರೀಕ್ಷೆ ಇತ್ತು. ಆದರೂ ಈಗ ಸಿಕ್ಕಿರುವ ಸ್ಥಾನಗಳಿಗೆ ತೃಪ್ತಿ ಇದೆ. ಮುಂದೆ 2029ರಲ್ಲಿ ನಡೆಯುವ ಚುನಾವಣೆಗೆ ಸಹಜವಾಗಿ ಶೇ.33 ರಷ್ಟು ಸೀಟು ಮಹಿಳೆಯರಿಗೆ ಸಿಗಲಿದೆ" ಎಂದು ಹೇಳಿದರು.
"ಕಾಂಗ್ರೆಸ್ನಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಲು ಯಾವ ಮಂತ್ರಿಗಳೂ ಸಿದ್ಧವಿಲ್ಲ. ಅವರ ಮಕ್ಕಳು, ಅಕ್ಕ, ತಂಗಿ ಹೀಗೆ ರಾಜಕೀಯ ಗಂಧ ಗೊತ್ತಿಲ್ಲದವರನ್ನು ತರಲಾಗಿದೆ. ನಮ್ಮ ಗಾಯಿತ್ರಿ ಸಿದ್ದೇಶ್ವರ್ ಬಹಳ ಸಮಯಗಳಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಮಹಿಳಾ ಮೋರ್ಚಾದ ಅಭ್ಯಾಸ ವರ್ಗದ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಜನಸಂಘ ಕಾಲದಿಂದ ಅವರು ಕೆಲಸ ಮಾಡಿದ್ದಾರೆ" ಎಂದು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಿರುವುದನ್ನು ಮಾಳವಿಕಾ ಸಮರ್ಥಿಸಿಕೊಂಡರು.
ಬಿಜೆಪಿ ಮಹಿಳಾ ಕಾರ್ಯಕರ್ತರು ಈಶ್ವರಪ್ಪ ಸಭೆಗೆ ಹೋಗುತ್ತಿರುವುದು ತಪ್ಪಲ್ಲ: "ಈಶ್ವರಪ್ಪ ಅವರ ಸಭೆಗಳಿಗೆ ಹೆಚ್ಚಿನ ಮಹಿಳೆಯರು ಹೋಗುತ್ತಿರುವುದರಲ್ಲಿ ತಪ್ಪೇನಿಲ್ಲ. ಶಿವಮೊಗ್ಗ ಒಂದು ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದ ಯಾರೂ ಹೋಗಿಲ್ಲ. ಅವರೇ ಬೆಳೆಸಿದವರು, ಆದಕಾರಣ ಅವರ ಸಭೆಗಳಿಗೆ ಪಕ್ಷದ ಮಹಿಳೆಯರು ಹೋಗಿದ್ದಾರೆ, ತಪ್ಪೇನಿಲ್ಲ. ಕಾದು ನೋಡಿ ಈಶ್ವರಪ್ಪ ವಾಪಸ್ ಬರಲಿದ್ದಾರೆ. ಅವರು ಪಕ್ಷ ವಿರೋಧಿಯಲ್ಲ, ಅಸಮಾಧಾನ ಅಷ್ಟೇ. ವಾಪಸ್ ಪಕ್ಷಕ್ಕೆ ಬರಲಿದ್ದಾರೆ" ಎಂದರು.