ಬೆಂಗಳೂರು: ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಪಟಾಕಿಯಿಂದ 170 ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯ ಆಗಿದೆ. ಈ ಪೈಕಿ ಪಟಾಕಿ ಸಿಡಿಸಿ ಗಾಯಗೊಂಡವರಿಗಿಂತ ಅಕ್ಕಪಕ್ಕದಲ್ಲಿ ನಿಂತು ಕಿಡಿಗಳು ಬಿದ್ದು ಗಾಯಗೊಂಡಿರುವ ಪ್ರಕರಣಗಳೇ ಹೆಚ್ಚು ವರದಿಯಾಗಿವೆ.
ನಗರದಲ್ಲಿ ಕಳೆದ ಬಾರಿಗಿಂತ ಈ ದೀಪಾವಳಿ ಆಚರಣೆ ವೇಳೆ ಪಟಾಕಿ ಅವಘಡಗಳಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಪಟಾಕಿ ಅವಘಡಗಳಿಂದ ಈವರೆಗೆ 170ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯ ಮಾಡಿಕೊಂಡು, ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರಿಗೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದ್ದು, ಶಸ್ತ್ರಚಿಕಿತ್ಸೆಯನ್ನು ಕೂಡ ನಡೆಸಲಾಗಿದೆ.
ಮುಖ್ಯವಾಗಿ ಸರ್ಕಾರಿ ಮಿಂಟೋ ಆಸ್ಪತ್ರೆಯಲ್ಲಿ ಈವರೆಗೆ 55 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 34 ಮಕ್ಕಳು ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. 26 ಮಂದಿಗೆ ಗಂಭೀರ ಮತ್ತು 29 ಮಂದಿಗೆ ಸಣ್ಣ ಪಮಾಣದ ಗಾಯಗಳಾಗಿವೆ. 6 ಮಂದಿಗೆ ಸರ್ಜರಿ ಮಾಡಲಾಗಿದೆ. 29 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದಾರೆ. ಒಟ್ಟು 14 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಂದೇ ದಿನ ಅತಿ ಹೆಚ್ಚು 20 ಪಟಾಕಿ ಅವಘಡ ಪ್ರಕರಣಗಳು ದಾಖಲಾಗಿವೆ. ಇನ್ನು, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯ, ಅಗರ್‌ವಾಲ್, ವಾಸನ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಹಲವರು ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ಸಿಡಿಸುವಾಗ ಸ್ನೇಹಿತರ ಹುಚ್ಚಾಟಕ್ಕೆ ಯುವಕ ಬಲಿ, 6 ಮಂದಿ ಬಂಧನ