ಹುಬ್ಬಳ್ಳಿ(ಧಾರವಾಡ): ಭಾರತೀಯ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಅವರಿಗೆ ಸಾಲು ಸಾಲು ಬೆದರಿಕೆಗಳು ಬರುತ್ತಿವೆ. ಕೊಲೆ ಮಾಡೋದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕುತ್ತಿದೆ. ಇತ್ತೀಚೆಗಷ್ಟೇ ನಟನಿಗೆ ಹೊಸ ಕೊಲೆ ಬೆದರಿಕೆ ಬಂದಿತ್ತು. ಈ ಪ್ರಕರಣದ ಆರೋಪಿ ಹುಬ್ಬಳ್ಳಿಯಲ್ಲಿದ್ದಾನೆ ಎಂಬ ಮಾಹಿತಿ ಮುಂಬೈ ಪೊಲೀಸರಿಗೆ ಸಿಕ್ಕಿದ್ದು, ತಂಡ ಹುಬ್ಬಳಿಗೆ ಆಗಮಿಸಿ ಶೋಧ ನಡೆಸುತ್ತಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು. ಕೃಷ್ಣಮೃಗ ಬೇಟೆ ಕೇಸ್ನಲ್ಲಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದ. ಈತ ಕರ್ನಾಟಕದಿಂದ ಈ ಬೆದರಿಕೆ ಹಾಕಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಮುಂಬೈ ಪೊಲೀಸರು ಹುಬ್ಬಳ್ಳಿಗೆ ಬಂದಿದ್ದು, ಆರೋಪಿಯ ಹುಡುಕಾಟದಲ್ಲಿದ್ದಾರೆ.
ಬೆದರಿಕೆ ಕರೆ ಬಳಿಕ ನಟ ಸಲ್ಮಾನ್ ಖಾನ್‌ಗೆ ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಈ ಸಂದೇಶ ಬಂದಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ನ ಜನಪ್ರೀಯ ನಟ ಸಲ್ಮಾನ್ ಖಾನ್‌ಗೆ ಅಕ್ಟೋಬರ್ 30ರಂದು ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬಂದಿತ್ತು. ಈ ವೇಳೆ ಕರೆ ಮಾಡಿದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧವೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಅಕ್ಟೋಬರ್ 28ರಂದು ಕೂಡ ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ಧಿಕಿಗೆ ಕೊಲೆ ಬೆದರಿಕೆ ಹಾಕಿದ್ದ 20 ವರ್ಷದ ಯುವಕನನ್ನು ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದಾರೆ. ಯುವಕ ವಿಚಾರಣೆ ಕೂಡಾ ನಡೆದಿದೆ.
ಬೆದರಿಕೆ ಹಾಕಿ ಕ್ಷಮೆ ಕೇಳಿದ್ದ ಆರೋಪಿ: ಬೆದರಿಕೆ ಹಾಕಿದ ವ್ಯಕ್ತಿ ಕ್ಷಮೆಯಾಚಿಸಿದ್ದ ''ನಾನು ಈ ಸಂದೇಶವನ್ನು ತಪ್ಪಾಗಿ ಕಳುಹಿಸಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಬೆದರಿಕೆ ಹಾಕಿದ ವ್ಯಕ್ತಿಯೇ ಪುನಃ ಹೀಗೆ ಮೆಸೇಜ್ ಕಳುಹಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಕಾಂತಾರ ಸೆಟ್ನಲ್ಲಿ ರಿಷಬ್ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್; 2 ಶೆಡ್ಯೂಲ್ ಕಂಪ್ಲೀಟ್, ಬಜೆಟ್ ಮಾಹಿತಿ ಇಲ್ಲಿದೆ