ಆನೇಕಲ್: ರಾಸಾಯನಿಕ ಮತ್ತು ಕಲುಷಿತ ನೀರು ಹರಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವಿಗೀಡಾಗಿರುವ ಘಟನೆ ತಾಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಕೆರೆಯಲ್ಲಿ ಶುಕ್ರವಾರ ನಡೆದಿದೆ.
ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ಮತ್ತು ಬಡಾವಣೆಗಳ ತ್ಯಾಜ್ಯ ನೀರು ಹಾಗೂ ಸಮೀಪದಲ್ಲಿರುವ ಬಿಬಿಎಂಪಿ ಘನತ್ಯಾಜ್ಯ ಘಟಕದ ಕಲುಷಿತ ನೀರು ಕೆರೆಗೆ ಸೇರಿದ್ದು, ಪರಿಣಾಮ ಕಳೆದ ಮೂರು ದಿನಗಳಿಂದ ಮೀನುಗಳು ಒದ್ದಾಡಿ ಒದ್ದಾಡಿ ಮೃತಪಟ್ಟಿವೆ. ಕೊಳೆತಿರುವುದರಿಂದ ಗಬ್ಬು ನಾರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಸಹ ಈ ಕೆರೆಯಲ್ಲಿ ಮೀನುಗಳು ಇದೇ ರೀತಿ ಸತ್ತಿದ್ದವು. ಮಳೆ ಹೆಚ್ಚಾದಾಗ ಮಳೆ ನೀರಿನ ಜೊತೆಗೆ ಕಲುಷಿತ ನೀರನ್ನು ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಮೀನುಗಳ ಜೀವಕ್ಕೆ ಸಂಚಕಾರ ಬಂದಿದೆ ಎಂದು ಸ್ಥಳೀಯ ಅನಿಲ್ ಎಂಬುವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ್ ಮಾತನಾಡಿ, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಲಾಗಿದ್ದು, ಕಸವನ್ನು ಘಟಕದ ಹೊರಭಾಗದಲ್ಲಿ ಹಾಕಲಾಗಿದೆ. ಲಾರಿಗಟ್ಟಲೇ ಕಸ ಎಸೆಯಲಾಗಿದೆ. ಮಳೆ ಹೆಚ್ಚಾದ್ದರಿಂದ ಕಸದಲ್ಲಿನ ತ್ಯಾಜ್ಯ ನೀರು, ಕೆರೆಗೆ ಹರಿದ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಮೃತಪಟ್ಟಿವೆ. ಈ ಬಗ್ಗೆ ಘಟಕದ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಪರಿಸರ ಹಾಳು ಮಾಡಿದ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.
ಕೆರೆಯಲ್ಲಿ ಮೀನುಗಳ ಮಾರಣಹೋಮಕ್ಕೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ. ಕೆರೆ ಅಭಿವೃದ್ಧಿಗಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಕೈಗೊಂಡಿದ್ದ ಪ್ರಯತ್ನಗಳು ವಿಫಲವಾಗಿದೆ. ವಿಷಕಾರಿ ನೀರು ಕೆರೆಗೆ ಹರಿದಿದ್ದರಿಂದ ಮೀನುಗಳು ಸತ್ತಿವೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಯೋಕಾನ್ ಪ್ರತಿಷ್ಠಾನದ ಮೂಲಕ ಚಿಕ್ಕನಾಗಮಂಗಲ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಬಯೋಕಾನ್ ಕೆರೆ ಎಂದು ಕರೆಯಲಾಗುತ್ತಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ್ದ ಕೆರೆಗೆ ತ್ಯಾಜ್ಯ ನೀರು ಹರಿಯುವಂತಾಗಿದ್ದರಿಂದ ಕೆರೆಯಲ್ಲಿನ ಜಲಚರಗಳಿಗೆ ಹಾನಿಯುಂಟಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದಾವಣಗೆರೆ: ಕೆರೆಯಲ್ಲಿ 5 ರಿಂದ 10 ಕೆಜಿಯ 1 ಲಕ್ಷ ಮೀನುಗಳ ಮಾರಣಹೋಮ - FISH DIED