ಬಾಗಲಕೋಟೆ: ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಕಿವಿ ಕೇಳಲ್ಲ, ಮಾತು ಬರುವುದಿಲ್ಲ. ಆದರೂ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರ್ಪಡಿಸಿದರು ಕ್ರೀಡಾಪಟುಗಳು. ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದ ಬಸವೇಶ್ವರ ಕಾಲೇಜ್ ಮೈದಾನದಲ್ಲಿ.
ರಾಜ್ಯ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ಶುಕ್ರವಾರ, ರಾಜ್ಯಮಟ್ಟದ 14ನೇ ಕ್ರೀಡಾಕೂಟ ಆಯೋಜಿಸಲಾಯಿತು. ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಿವುಡರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, "ವಿಶೇಷ ಚೇತನರಲ್ಲಿ ಅಗಾಧವಾದ ಶಕ್ತಿ ಇದ್ದು, ಅವರಲ್ಲಿರುವ ಕ್ರೀಡಾಪ್ರತಿಭೆ ಅನಾವರಣಕ್ಕೆ ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದ ನಂತರ ಕ್ರೀಡಾ ಕ್ಷೇತ್ರಕ್ಕೆ ಅಪಾರ ಪ್ರಮಾಣ ಯೋಜನೆಗಳ ಮೂಲಕ ಶಕ್ತಿ ತುಂಬಿದ್ದಾರೆ. ಇಂದು ಭಾರತದ ಕ್ರೀಡಾಪಟುಗಳು ಜಗತ್ತಿನಾದ್ಯಂತ ದಾಖಲೆಯ ಸಾಧನೆ ಮಾಡುತ್ತಿದ್ದಾರೆ" ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ 25 ಜಿಲ್ಲೆಗಳಿಂದ 500ಕ್ಕೂ ಹೆಚ್ಚೂ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅಥ್ಲೆಟಿಕ್ ಕ್ರೀಡೆಗಳಾದ ಓಟ, ಉದ್ದ ಜಿಗಿತ, ಎತ್ತರ ಜೀಗಿತ, ಚಕ್ರ ಎಸೆತ, ಮಹಿಳೆಯರ ಹಾಗೂ ಪುರುಷರ 600ಮೀ.ರಿಂದ 1600 ಮೀ.ವರೆಗಿನ ಓಟ, ಸೇರಿಂದತೆ ಅನೇಕ ಕ್ರೀಡೆಗಳು ಜರುಗಲಿವೆ. ಶ್ರವಣ ದೋಷದಿಂದ ಮಾತು ಬಾರದೇ ಸನ್ನೆ ಮೂಲಕ ಪ್ರತಿ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಪ್ರೋತ್ಸಹಿಸುವ ಪ್ರೇರೆಪಿಸುವಂತಹ ದೃಶ್ಯ ಕಂಡುಬಂತು.
ಸಂಘಟನೆ ಜಿಲ್ಲಾಧ್ಯಕ್ಷ ಸುನೀಲ್ ಕಂದಕೂರ ತಮ್ಮ ಸನ್ನೆ ಭಾಷೆಯಲ್ಲಿ ಮಾತನಾಡಿ, "ರಾಜ್ಯ ಕ್ರೀಡಾಕೂಟಕ್ಕೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ" ಎಂದರು. ಶಿಕ್ಷಕಿ ಶ್ರೀದೇವಿ ಮಾತನಾಡಿ, "ಮಕ್ಕಳಿಗೆ ಶಿಕ್ಷಣಕ್ಕಿಂತ ಕಲೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ" ಎಂದರು.
"ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಬಾಗಲಕೋಟೆ ನಗರದಲ್ಲಿ ಚನ್ನಾಗಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳಿಗೆ ಮುಂದೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರದ ಮಟ್ಟದ ಕ್ರೀಡಾಕೂಟ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ" ಎಂದು ಆಯೋಜಕರು ತಿಳಿಸಿದರು.