ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಅಖಾಡ ಈಗಿನಿಂದಲೇ ಸಜ್ಜಾಗುತ್ತಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಕ್ಷೇತ್ರದಲ್ಲಿ ದಿನಪೂರ್ತಿ ಟೆಂಪಲ್ ರನ್ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಚನ್ನಪಟ್ಟಣ ಇನ್ನೇನು ಉಪ ಚುನಾವಣೆಗೆ ಸಜ್ಜಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಸದರಾಗಿ ಚುನಾಯಿತರಾದ ಬಳಿಕ ತೆರವಾದ ಶಾಸಕ ಸ್ಥಾನಕ್ಕೆ ಚನ್ನಪಟ್ಟಣದಲ್ಲಿ ಇದೀಗ ಉಪಸಮರದ ಲೆಕ್ಕಾಚಾರ ಶುರುವಾಗಿದೆ. ಈ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಖಾಡ ಹೈವೋಲ್ಟೇಜ್ ಹಣಾಹಣಿಯ ಎಲ್ಲ ಮುನ್ಸೂಚನೆ ನೀಡುತ್ತಿದೆ. ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಡುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬುಧವಾರ ಡಿಸಿಎಂ ಚನ್ನಪಟ್ಟಣ ತಾಲೂಕಿನಲ್ಲಿ ದಿನಪೂರ್ತಿ ಟೆಂಪಲ್ ರನ್ ನಡೆಸಲಿದ್ದಾರೆ. ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಉಪಸಮರದ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನೇ ಚನ್ನಪಟ್ಟಣದಲ್ಲಿ ಕಣಕ್ಕಿಳಿಸುವ ಕೂಗು ಜೋರಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಡಿಕೆಶಿ ಚನ್ನಪಟ್ಟಣ ಭೇಟಿ ಅಚ್ಚರಿ ಮೂಡಿಸಿದೆ.
ಡಿಕೆಶಿ ಟೆಂಪಲ್ ರನ್ ವಿವರ: ಇಂದು ಬೆಳಗ್ಗೆ 11 ಗಂಟೆಯಿಂದ ಡಿಕೆಶಿ ಚನ್ನಪಟ್ಟಣ ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ಆರಂಭಿಸಲಿದ್ದಾರೆ. ಮೊದಲಿಗೆ ಕೆಂಗಲ್ ಹನುಮಂತರಾಯ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನೀಲಕಂಠೇಶ್ವರ ದೇಗುಲ, ಕಾಳಮ್ಮ ದೇವಸ್ಥಾನ, ಕೋಟೆ ವರದರಾಜ ಸ್ವಾಮಿ ದೇವಸ್ಥಾನ, ದೊಡ್ಡಮಳೂರಿನ ಅಪ್ರಮೇಯ ದೇವಸ್ಥಾನ, ದೇವರಹಳ್ಳಿಯ ಬೀರೇಶ್ವರ ಸನ್ನಿದಿ, ಗೌಡಗೆರೆಯ ಚಾಮುಂಡೇಶ್ವರಿ, ಸಂಜೀವರಾಯದೇಗುಲ, ಮಹದೇಶ್ವರ ಸ್ವಾಮಿ ದೇಗುಲ, ಧರ್ಮರಾಯಸ್ವಾಮಿ ಸನ್ನಿದಿ, ಹುಣಸನಹಳ್ಳಿ ಬಿಸಿಲಮ್ಮ ದೇವಸ್ಥಾನ, ಯೋಗನರಸಿಂಹ ಸ್ವಾಮಿ ಹಾಗೂ ರಾಮಮಂದಿರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಸಾಹಿತಿಗಳನ್ನು ಕಾಂಗ್ರೆಸ್ ಕಚೇರಿಗೆ ಕರೆದರೆ ತಪ್ಪೇನಿದೆ ?: ಡಿಸಿಎಂ ಡಿ ಕೆ ಶಿವಕುಮಾರ್ - D K Shivakumar
ದೇಗುಲಗಳ ಭೇಟಿ ಜೊತೆಗೆ ಡಿ.ಕೆ. ಶಿವಕುಮಾರ್, ಕ್ಷೇತ್ರದ ಪರ್ಯಟನೆಯನ್ನೂ ಮಾಡಲಿದ್ದಾರೆ. ಜನರ ನಾಡಿಮಿಡಿತ ಅರಿಯಲು ಆ ಮೂಲಕ ಮುನ್ನುಡಿ ಬರೆಯುತ್ತಿದ್ದಾರೆ. ಚನ್ನಪಟ್ಟಣ ಉಪಸಮರದಲ್ಲಿ ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಹೆಸರು ಬಲವಾಗಿ ಮುನ್ನೆಲೆಗೆ ಬರುತ್ತಿದೆ. ಇದರ ಜೊತೆಗೆ, ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರೂ ಅಲ್ಲಲ್ಲಿ ಕೇಳಿ ಬರುತ್ತಿದೆ.
ಇತ್ತ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಕಾಂಗ್ರೆಸ್ ಪಕ್ಷ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ರನ್ನು ಕಣಕ್ಕಿಳಿಸುವ ಬಗ್ಗೆಯೂ ಲೆಕ್ಕಾಚಾರ ಮಾಡುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಇವಿಎಂ ಕಾರಣಕ್ಕೆ ಜೆಡಿಎಸ್, ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ - DK Shivakumar