ಬೆಂಗಳೂರು: "ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷದ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿ ಅಧಿಕಾರಾವಧಿಯನ್ನು ಎರಡು ವರ್ಷಗಳ ಅವಧಿಗೆ ಮಾತ್ರ ನೀಡಿರುವುದಕ್ಕೆ ಕೆಲವರ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯಿಸಿ, "ಪಕ್ಷದ ಎಲ್ಲರಿಗೂ ಅವಕಾಶ ದೊರೆಯಬೇಕು. ಇತರರಿಗೂ ಅಧಿಕಾರ ಹಂಚಬೇಕು. ಆದ ಕಾರಣ 2 ವರ್ಷ ಮಾತ್ರ ಅಧಿಕಾರಾವಧಿ ಎಂದು ಹೇಳಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.
"ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಸಿದ್ದರಾಮಯ್ಯ ಅವರದ್ದು ಏನೂ ಇಲ್ಲ, ಡಿ ಕೆ ಶಿವಕುಮಾರ್ ಅವರದ್ದೂ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಆದ ಕಾರಣ ಎಲ್ಲರಿಗೂ ಅವಕಾಶ ನೀಡಬೇಕು" ಎಂದರು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, "ಕರ್ನಾಟಕದಲ್ಲಿ 224 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಏನಾಯಿತು?. ಬಿಜೆಪಿಯವರು ಲೋಕಸಭೆಯ 543 ಸ್ಥಾನಗಳನ್ನೂ ಗೆಲ್ಲಲಿ. ಬೇಡ ಎಂದವರು ಯಾರು?. ವಿಧಾನಸಭಾ ಚುನಾವಣೆಯಲ್ಲಿ ನಾವು 136- 140 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ಅವರು 224 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆನಂತರ ಏನಾಯಿತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಂಡ್ಯ ಟಿಕೆಟ್ ಅಂತಿಮವಾಗಿಲ್ಲ-ಯಡಿಯೂರಪ್ಪ
ನಿಗಮ ಮಂಡಳಿಗಳಲ್ಲಿ ಮುಂದೆ ಬೇರೆಯವರಿಗೆ ಅವಕಾಶ ಸಿಗುತ್ತದೆ - ಡಿಸಿಎಂ: ಇನ್ನು ಇದೇ ವಿಚಾರವಾಗಿ ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್, "ಕಾಂಗ್ರೆಸ್ ಪಕ್ಷದ ಸೇವೆ ಮಾಡಬೇಕು ಅಂದುಕೊಂಡವರು ಏನು ಕೊಟ್ಟರು ಸೇವೆ ಮಾಡಬೇಕು. ಯಾರು ಏನು ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ನೂರಾರು ಜನ ಕಾರ್ಯಕರ್ತರನ್ನು ಕೂಡ ನೇಮಕ ಮಾಡುವ ವ್ಯವಸ್ಥೆ ಮಾಡುತ್ತೇವೆ. ಈಗ 39 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿದ್ದೇವೆ, ಮತ್ತೆ 39 ಮಂದಿಯನ್ನು ಮುಂದಿನ ಹಂತದಲ್ಲಿ ಮಾಡುತ್ತೇವೆ. ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹೀಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕಿದೆ" ಎಂದಿದ್ದರು.
"ನಾವು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಎಲ್ಲರಿಗೂ ಮಂತ್ರಿಯಾಗಬೇಕು ಅನ್ನೋ ಆಸೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ನಾವು ಕೆಲವರನ್ನು ಗುರುತಿಸಿದ್ದೇವೆ. ಕೆಲವು ರೊಟೇಶನ್ ಆಗುತ್ತೆ ಅಂತ ಹೇಳಿದ್ದೇವೆ" ಎಂದಿದ್ದರು.