ಬೆಂಗಳೂರು: ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ಧ್ವನಿ ಎತ್ತಲೇಬೇಕು. ಈಗ ನಮಗೆ ಬೇರೆ ವಿಧಿನೇ ಇಲ್ಲ. ನಾನು ಬಿಜೆಪಿ ಹಾಗೂ ಜೆಡಿಎಸ್ ಎಂಪಿಗಳಿಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆದ ತಾರತಮ್ಯದ ಬಗ್ಗೆ ಬಿಜೆಪಿ ದಾಖಲೆ ಬಿಡುಗಡೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ಮನಮೋಹನ್ ಸಿಂಗ್ ಸರ್ಕಾರ ಹೋಗಿ 10 ವರ್ಷ ಆಗಿದೆ. ಇದನ್ನೂ ಕೇಳುವವರಿಗೆ ಜ್ಞಾನ ಇರಬೇಕು. ಬುದ್ಧಿವಂತಿಕೆ ಇರಬೇಕು. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ. ನೀವು ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಅಂತಿದ್ರಿ. ಡಬಲ್ ಎಂಜಿನ್ ಸರ್ಕಾರ ಮಾಡಿದ್ರಿ. ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಏನು ತಂದಿತ್ತು. ಅದು ಬಹಳ ಮುಖ್ಯ ಎಂದು ಹೇಳಿದರು.
ಬರಗಾಲದ ಮೀಟಿಂಗ್ ಮಾಡಿಲ್ಲ: '27 ಸಂಸದರನ್ನು ಇಟ್ಟುಕೊಂಡು ಬರಗಾಲದ ಮೀಟಿಂಗ್ ಮಾಡಿಸಲು ಸಾಧ್ಯವಾಗಿಲ್ಲ. ಸಭೆ ನಡೆಸಿ ಹಣ ಬಿಡುಗಡೆ ಮಾಡಿಸಿಲ್ಲ. ರಾಜ್ಯ ಸರ್ಕಾರ ಏನು ಕೊಟ್ಟಿಲ್ಲ ಅಂತಾರೆ, ಮೊದಲ ಬಾರಿಗೆ ನಮ್ಮ ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ 2000 ಹಣ ಜಮೆ ಮಾಡಿದ್ದೇವೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾವು ದೆಹಲಿಗೆ ಹೊರಟಿವಿ ಅಂತ ಈಗ ಕೇರಳದವರು ಹೊರಟಿದ್ದಾರೆ. ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಅದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯ ತಾರತಮ್ಯ ಹೊರ ತೆಗೆಯುತ್ತೇವೆ ಅಂದರೆ, ಬಿಜೆಪಿಯವರು ಅನ್ಯಾಯ ಮಾಡಿದೆ ಅಂತ ಒಪ್ಪಿಕೊಂಡ ಹಾಗೆ ಆಯಿತಲ್ಲ. ಈಗ ಸರಿ ಮಾಡಬೇಕಿತ್ತಲ್ಲ' ಎಂದು ಪ್ರಶ್ನಿಸಿದರು.
ಭದ್ರಾ ಮೇಲ್ದಂಡೆ: 'ಕಳೆದ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಘೋಷಿಸಿದ್ದರೋ ಇಲ್ಲವೋ?. ಆ ಪೈಕಿ ಒಂದು ರೂಪಾಯಿ ಬಿಡುಗಡೆ ಮಾಡಿದ್ರಾ?. ಮೆಟ್ರೋ ವಿಚಾರದಲ್ಲಿ ಏನು ಮಾಡಿದ್ರು? ಸುಮ್ಮನೆ ಏನೇನೋ ಮಾತನಾಡುತ್ತಾರೆ' ಎಂದು ಟೀಕಿಸಿದರು.
ಮೋದಿ ಗ್ಯಾರಂಟಿ ಶ್ರೇಷ್ಠ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಏಳು ತಿಂಗಳಿಗೆ ಅವರು ಒಳ್ಳೆಯ ಲಾಟರಿ ಹೊಡೆದಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದಾರೆ, ತಂದೆಯವರಿಂದ ಅವರಿಗೆ ಪಾಲು ಸಿಕ್ಕಂತಾಗಿದೆ. ನನ್ನದೇನು ಅಭ್ಯಂತರ ಇಲ್ಲ. ಹೊಸದಾಗಿ ಏನೋ ಮಾತನಾಡುತ್ತಾರೆ. ಅದಕ್ಕೆ ಡಿಸ್ಕರೇಜ್ ಮಾಡಲ್ಲ. ಗ್ಯಾರಂಟಿ ಬಗ್ಗೆ ಮೋದಿಯವರು ಏನು ಹೇಳಿದರು. ಈಗ ಕಾಂಗ್ರೆಸ್ ಗ್ಯಾರಂಟಿ ಪದವನ್ನು ಮೋದಿ ಗ್ಯಾರಂಟಿ ಎಂದು ಬಳಸುತ್ತಿದ್ದಾರಲ್ಲ ಎಂದರು.
ಇದನ್ನೂಓದಿ:'ಆರ್ ಆಶೋಕ್ ಹಿಂದು ಇರಬಹುದು, ಆದ್ರೆ ಅವನಗಿಂತ ಒಳ್ಳೆಯ ಹಿಂದು ನಾನು' : ಸಿಎಂ ಸಿದ್ದರಾಮಯ್ಯ