ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಿದ ನಂತರ, ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿವೆ ಎಂದು ಡಿ.ಕೆ.ಶಿವಕುಮಾರ್ ತಮ್ಮ ಮಾಧ್ಯಮ ಸಲಹೆಗಾರರ ಮೂಲಕ ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಗೆ ಮೊದಲು ನಿಶಾ ಯೋಗೇಶ್ವರ್ ಅವರು ಕುಮಾರಕೃಪಾದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒಮ್ಮೆ ಭೇಟಿ ಮಾಡಿದ್ದರು. ಆಗ ಡಿಕೆಶಿ, ತಂದೆ-ಮಗಳ ವಿಚಾರದಲ್ಲಿ ತಾನು ತಲೆ ಹಾಕುವುದಿಲ್ಲ. ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿಗೆ ಒಳಗಾಗಲು ಬಯಸುವುದಿಲ್ಲ. ನಿಮ್ಮ ತಂದೆಯ ಜೊತೆ ಮಾತನಾಡಿ ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದರು ಎಂದು ತಿಳಿಸಲಾಗಿದೆ.
ಹೀಗಾಗಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕುಗಳಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ಸಂಪೂರ್ಣ ದೂರವಾಗಿವೆ ಎಂದು ಹೇಳಿದ್ದಾರೆ.
ನಿಶಾ ಯೋಗೇಶ್ವರ್ ಆರೋಪವೇನು?: "ಡಿ.ಕೆ.ಶಿವಕುಮಾರ್ ಸರ್, ನನ್ನ ಸಿಡಿ ನಿಮ್ಮ ಬಳಿ ಇದ್ದರೆ ಅದನ್ನು ಧೈರ್ಯವಾಗಿ ಬಿಡುಗಡೆ ಮಾಡಿ. ನನ್ನ ಸಿಡಿ ಇಟ್ಟುಕೊಂಡು ತಂದೆಯನ್ನು ಬ್ಲಾಕ್‌ಮೇಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದೀರಿ ಎಂದು ಖಾಸಗಿ ಯೂಟ್ಯೂಬ್ ಚಾನೆಲ್ ಸುದ್ದಿ ಪ್ರಸಾರ ಮಾಡಿದೆ. ಈ ಕುರಿತು ನೀವು ಸ್ಪಷ್ಟನೆ ನೀಡಬೇಕು" ಎಂದು ನಿಶಾ ಯೋಗೇಶ್ವರ್ ವಿಡಿಯೋ ಮೂಲಕ ಒತ್ತಾಯಿಸಿದ್ದರು.
ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಸಿಪಿ ಯೋಗೇಶ್ವರ್; ಸಿಪಿವೈ ಹೇಳಿದ್ದೇನು? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!