ರಾಮನಗರ: ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದ್ದೇ ಚನ್ನಪಟ್ಟಣದಿಂದ. ಈಗ ಇಲ್ಲಿನ ಕೆಂಗಲ್ ಆಂಜನೇಯಸ್ವಾಮಿಯ ದೇವಸ್ಥಾನದಿಂದ ಹೊಸ ರಾಜಕೀಯ ಅಧ್ಯಾಯ ಪ್ರಾರಂಭಿಸಲು ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿಯ ಆಂಜನೇಯ ದೇವಾಸ್ಥಾನದ ಸಮೀಪ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಮನ ಭಂಟ ಆಂಜನೇಯ ಸೇವೆಯ ಪ್ರತೀಕ. ಅದೇ ರೀತಿ ನಾನು ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಬಂದಿದ್ದೇನೆ. ಅತಿಚಿಕ್ಕ ವಯಸ್ಸಿಗೆ ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದು ನಿಮ್ಮ ಆಶೀರ್ವಾದದಿಂದ. ಚನ್ನಪಟ್ಡಣದ ಮಹಾಜನತೆಯ ಆಶೀರ್ವಾದ ನಮಗೆ ಬೇಕಿದೆ. ಜನರು ಪಕ್ಷಬೇಧ ಮರೆತು ಸರ್ಕಾರದ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. ನನ್ನ ಅಧಿಕಾರವನ್ನು ಚನ್ನಪಟ್ಟಣದ ಬದಲಾವಣೆಗೆ ಉಪಯೋಗಿಸಿಕೊಳ್ಳುವೆ ಎಂದರು.
ನನ್ನ ತಮ್ಮ ಡಿ.ಕೆ.ಸುರೇಶ್ಗೆ ಸೋಲಾಗಿದೆ ಎಂದರೆ ನನ್ನಲ್ಲೇ ಏನೂ ನ್ಯೂನತೆ ಇದೆ ಎಂದು ಕ್ಷೇತ್ರದ ಜನ ಅರ್ಥ ಮಾಡಿಸಿದ್ದಾರೆ. ನನಗೆ ಬುದ್ಧಿವಾದ ಹೇಳಲು ಜನರು ಈ ತೀರ್ಮಾನವನ್ನು ನೀಡಿದ್ದಾರೆ. ಇದನ್ನು ನಾನು ಅರಿತುಕೊಂಡಿದ್ದೇನೆ. ಈ ವಿಚಾರದಲ್ಲಿ ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಗೆದ್ದಿರುವ ವ್ಯಕ್ತಿ ತುಂಬು ಹೃದಯದಿಂದ ಸುರೇಶ್ಗಿಂತ ಹೆಚ್ಚಿನ ಜನಸೇವೆ ಮಾಡಲಿ ಎಂದು ಹೇಳಿದರು.
ನಾನು ಧೈರ್ಯ ಕಳೆದುಕೊಳ್ಳುವವನು, ಹೆದರಿ ಓಡಿ ಹೋಗುವವನಲ್ಲ. ಹೋರಾಟ ಮಾಡುವವನು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಭಕ್ತಿ ಇರುವ ಕಡೆ ಭಗವಂತ ಇದ್ದಾನೆ. ಪ್ರತಿ ಪಂಚಾಯ್ತಿಗೂ ಭೇಟಿ ನೀಡಿ ಚನ್ನಪಟ್ಟಣದ ಬದಲಾವಣೆಗೆ ನನಗೆ ಇರುವ ಶಕ್ತಿಯಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ: ಸರ್ಕಾರದಲ್ಲಿ ನಾನು ಉತ್ತಮ ಸ್ಥಾನದಲ್ಲಿದ್ದು ಚನ್ನಪಟ್ಟಣದ ಅಭಿವೃದ್ದಿಗೆ ರೂಪುರೇಷೆ ಸಿದ್ದಪಡಿಸಿದ್ದೇನೆ. ಭೂಮಿ ಋಣ, ತಾಯಿ ಋಣ, ಅನ್ನದ ಋಣ, ಜನರ ಋಣ ತೀರಿಸಬೇಕಾಗಿರುವುದು ನಮ್ಮ ಕರ್ತವ್ಯ. ಈಗ ಮತ್ತೊಮ್ಮೆ ನಿಮ್ಮ ಋಣ ತೀರಿಸುವ ಅವಕಾಶ ದೊರೆತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಿದ್ದು, ಮುಂದಿನ ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ತಿಳಿಸುತ್ತೇನೆ ಎಂದು ಹೇಳಿದರು.
ನಾನು ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಚನ್ನಪಟ್ಟಣದ ಒಂದು ಭಾಗ ನನ್ನ ಕ್ಷೇತ್ರದಲ್ಲಿತ್ತು. ನಿಮ್ಮ ಆಶೀರ್ವಾದದಿಂದ ಇಂದು ಉನ್ನತ ಸ್ಥಾನಕ್ಕೇರಿದ್ದೇನೆ. ಈ ಕ್ಷೇತ್ರದ ಮರುವಿಂಗಡಣೆ ಸಂದರ್ಭದಲ್ಲಿ ಬಿಟ್ಟು ಹೋಗುವಾಗ ನೋವು ಉಂಟಾಗಿತ್ತು. ನಾನು ಹೋದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಇತಿಹಾಸ ಎಂದರು.
ಇದನ್ನೂ ಓದಿ: ಚನ್ನಪಟ್ಟಣದ ಮತದಾರರು, ಪಕ್ಷ ಬಯಸಿದರೆ ಸ್ಪರ್ಧಿಸದೆ ವಿಧಿ ಇಲ್ಲ: ಡಿ.ಕೆ.ಶಿವಕುಮಾರ್ - D K Shivakumar