ಬೆಂಗಳೂರು : ಶ್ರೀರಾಮ ಏನು ಬಿಜೆಪಿಯವರ ಮನೆ ಆಸ್ತಿಯಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿದ ಅವರು, ನೀವು ಹಾಗೂ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಕೂಗಿರುವುದಕ್ಕೆ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಶ್ರೀರಾಮ ಬಿಜೆಪಿಯವರ ಮನೆಯ ಆಸ್ತಿಯೇ?. ರಾಮ ಯಾರ ಮನೆ ಆಸ್ತಿಯೂ ಅಲ್ಲ. ಗಾಂಧೀಜಿ ಅವರು 'ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಮ್' ಎಂದು ಹೇಳಿದ್ದು, ಅಲ್ಲಿ ರಾಮ ಹಾಗೂ ಸೀತೆ ಇಬ್ಬರೂ ಇದ್ದಾರೆ. ಅವರು ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಈ ರೀತಿ ಟೀಕೆ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ ಎಂದರು.
ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮೂಲಕ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಕಾಂಗ್ರೆಸ್ಸಿಗರು ಈ ಕೆಲಸ ಮಾಡುತ್ತಿದ್ದಾರೆ. ನಮಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂಬ ಅಸೂಯೆಯಿಂದ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಸಿಎಂ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ ಎಂದು ತಿಳಿಸಿದರು.
ಧರ್ಮದ ವಿಚಾರದಲ್ಲಿ ಬಿಜೆಪಿ ರಾಜಕಾರಣ: ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಬೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದೂ ಧರ್ಮ ನಿಮ್ಮ ಮನೆ ಆಸ್ತಿಯೇ? ಎಂದು ವಾಗ್ದಾಳಿ ನಡೆಸಿದರು.
ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ. ಪೂಜೆ ನೂರಾದರೂ ಭಕ್ತಿವೊಂದೇ. ಕರ್ಮ ಹಲವಾದರೂ ನಿಷ್ಠೆವೊಂದೆ. ದೇವನೊಬ್ಬ ನಾಮ ಹಲವು. ನಾವು ಕಲ್ಲು, ನೀರು, ಮರ, ಗಾಳಿಯಲ್ಲಿ ದೇವರನ್ನು ಕಾಣುತ್ತೇವೆ. ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಸಂವಿಧಾನದ ಪರವಾಗಿ ನಾವು ಎಲ್ಲಾ ಧರ್ಮಕ್ಕೂ ಆದ್ಯತೆ ನೀಡುತ್ತಾ ಬಂದಿದ್ದೇವೆ. ಎಲ್ಲರಿಗೂ ಸಮಾನವಾಗಿ ಕಂಡು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ. ನಿಮ್ಮ ಕೈಯಲ್ಲೂ ಅಧಿಕಾರ ಇತ್ತು. ಆಗ ಜನಪರ ಕಾರ್ಯಕ್ರಮ ಏಕೆ ಮಾಡಲಿಲ್ಲ. ಈಗ ಅಧಿಕಾರ ಹೋದ ನಂತರ ಸಂಕಟಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಬಲಿಷ್ಠವಾಯಿತು. ಇದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ನಾವೆಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದ ಭಾರತ ಜೋಡೋ ಯಾತ್ರೆ ವೇಳೆ ರಾಜ್ಯದಲ್ಲಿ ಚಾಮರಾಜನಗರದಿಂದ ರಾಯಚೂರಿನವರೆಗೂ ಹೆಜ್ಜೆ ಹಾಕಲಾಯಿತು. ಇದರ ಯಶಸ್ಸಿನಿಂದಾಗಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬಲಿಷ್ಠವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಸೇವೆಯ ಅವಕಾಶ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಹುಟ್ಟಿದೆ ಎಂದರು.
ನಾವು ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ಮಾಡಿದ್ದೆವು. ಆ ಸರ್ಕಾರವನ್ನು ಬೀಳಿಸಿದವರ ಜತೆಗೆ ಇಂದು ಜೆಡಿಎಸ್ ಸಖ್ಯ ಬೆಳೆಸಿದೆ. ಅನ್ಯಾಯ ಮಾಡಿದವರ ಜತೆ ಸೇರಿ ರಾಜಕಾರಣ ಮಾಡುತ್ತಿದ್ದಾರೆ. ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳು ಜನರಿಗೆ ನೆರವಾಗಿದೆ. ಅನ್ನಭಾಗ್ಯ ಯೋಜನೆ ಅಕ್ಕಿಯೇ ನಾವು ಜನರಿಗೆ ನೀಡುವ ಮಂತ್ರಾಕ್ಷತೆ. ನಾವು ಈ ಯೋಜನೆಗಳನ್ನು ಒಂದು ಜಾತಿ, ಧರ್ಮ, ಸಮುದಾಯ, ಪಕ್ಷದವರಿಗೆ ಮಾತ್ರ ನೀಡುತ್ತಿದ್ದೇವಾ? ಇದೇ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಹೇಳಿದರು.
ಎಲ್ಲರ ಅಭಿಪ್ರಾಯ ಪಡೆಯಲಾಗಿದೆ: ನಿಗಮ ಮಂಡಳಿ ನೇಮಕಾತಿಗೆ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಎಲ್ಲರ ಅಭಿಪ್ರಾಯ ಎಲ್ಲಿ ತೆಗದುಕೊಳ್ಳಬೇಕು ಅಲ್ಲಿ ತಗೋತೀವಿ. ಪಟ್ಟಿ ಸಿದ್ಧವಿದ್ದು, ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಶ್ರೀರಾಮನ ವಿರುದ್ಧವೆಂಬ ಅಪಪ್ರಚಾರವನ್ನು ಖಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ