ಶಿವಮೊಗ್ಗ: ಬಿಜೆಪಿಯವರು ಕೇವಲ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಅವರು ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನೇ ಇನ್ನೂ ಈಡೇರಿಸಿಲ್ಲ. ಬಿಜೆಪಿಗೆ ಯಾಕೆ ಮತ ಹಾಕಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಇಂದು ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಎರಡನೇ ಬಾರಿ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಗುರುಗಳಾದ ಬಂಗಾರಪ್ಪನವರ ಮಗಳ ನಾಮಪತ್ರ ಸಲ್ಲಿಕೆಗೆ ಬಂದಿದ್ದೇನೆ. ಶಿವಮೊಗ್ಗದಲ್ಲಿ ಒಂದು ಇತಿಹಾಸ ನಿರ್ಮಾಣವಾಗುತ್ತದೆ ಎಂಬ ವಿಶ್ವಾಸವಿದೆ. ಬಂಗಾರಪ್ಪನವರಂತೆ ಅವರ ಮಗಳು ಲೋಕಸಭೆ ಪ್ರವೇಶಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಹಾಗೂ ಬಿಜೆಪಿಗೆ ನಾನು ಪ್ರಶ್ನೆ ಕೇಳುತ್ತೇನೆ. ಜನ ನಿಮಗೆ ಯಾಕೆ ಮತ ಹಾಕಬೇಕು?. ಜನರಿಗೆ ನೀವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀರಾ?. ನೀವು ಕೊಟ್ಟ ಭರವಸೆಯನ್ನು ಒಮ್ಮೆ ನೋಡಿ. ನಿಮ್ಮದೇ ಕೇಂದ್ರ ಸರ್ಕಾರವಿತ್ತು, ಕೆಲಸ ಮಾಡಿಸಬಹುದಾಗಿತ್ತು. ಭದ್ರಾವತಿಯಲ್ಲಿ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಯನ್ನು ಉಳಿಸಲು ಆಗದ ನಿಮಗೆ ಯಾಕೆ ಮತ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಿದ್ದ ಸಂಸದನನ್ನು ಪಕ್ಷದಿಂದ ಕಿತ್ತು ಹಾಕಲಿಲ್ಲ. ದೇಶಾದ್ಯಂತ ನಾವು ಪ್ರತಿಭಟನೆ ನಡೆಸಿದ ಮೇಲೆ ಈಗ ನಾವು ಸಂವಿಧಾನ ಬದಲಾವಣೆ ಮಾಡಲ್ಲ ಎಂದು ಹೇಳುತ್ತಿದ್ದಾರೆ. 15 ಲಕ್ಷ ಹಣ ಹಾಕುವುದಾಗಿ ಹೇಳಿದ್ರಿ, ರೈತರ ಆದಾಯ ದ್ವಿಗುಣ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದೀರಿ. ಈಗ ಅದೆಲ್ಲಾ ಎಲ್ಲಿ?. ನಿಮಗೆ ಮತ ಕೇಳುವ ನೈತಿಕತೆ ಇಲ್ಲ. ನೀವು ಮತ ಕೇಳಬಾರದು, ನೀವು ಚುನಾವಣೆಗೆ ನಿಂತುಕೊಂಡಿದ್ದೇ ದೊಡ್ಡ ತಪ್ಪು ಎಂದು ಡಿಕೆಶಿ ಟೀಕಿಸಿದರು.
''ಹೆಣ್ಣು ಮಕ್ಕಳೆಲ್ಲ ಕುಮಾರಣ್ಣ ಎಂದು ಕರೆಯುತ್ತಾರೆ, ಕುಮಾರಸ್ವಾಮಿ ಎಂದು ಕರೆಯುವುದಿಲ್ಲ. ನಾನು ಅವರಿಗೆ ಅಣ್ಣ ಅಂತ ಕರೆಯುತ್ತೇನೆ. ನಾವು ಹೆಣ್ಣು ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲಿ ಎಂದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಕುಮಾರಣ್ಣ ನೀವು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಂತವರು. ಮಾಜಿ ಎಂಪಿ, ಹಾಲಿ ಶಾಸಕರು ನೀವು. ಗ್ಯಾರಂಟಿಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದಿದ್ದೀರಾ, ಹಳ್ಳಿಯಲ್ಲಿ ಅದರ ಅರ್ಥ ಏನು?. ರಾಜ್ಯಾದ್ಯಂತ ಹೆಣ್ಣು ಮಕ್ಕಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಉಡಾಫೆ ಮಾತುಗಳಿಂದ ಜನ ರೊಚ್ಚಿಗೆದ್ದಿದ್ದಾರೆ'' ಎಂದು ಹೇಳಿದರು.
ಈ ವೇಳೆ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ಪತಿ ಶಿವರಾಜ್ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar